ಕೆಲಸದಿಂದ ತೆಗೆಯುವಾಗ ಕಂಪನಿಗಳು ಪ್ರಾಮಾಣಿಕವಾಗಿರದಿದ್ದರೆ ಉದ್ಯೋಗಿಗಳಿಂದ ಬಯಸುವುದೇಕೆ ? ಚರ್ಚೆಗೆ ಕಾರಣವಾಗಿದೆ ಹೀಗೊಂದು ಪೋಸ್ಟ್

ಜಾಗತಿಕ ಆರ್ಥಿಕ ಬಿಕ್ಕಟ್ಟು ಎದುರಾಗುವ ಭೀತಿಯಿಂದ ಹಲವು ಕಂಪನಿಗಳು ಉದ್ಯೋಗಿಗಳನ್ನು ವಜಾಗೊಳಿಸುವ ಪ್ರಕ್ರಿಯೆಯಲ್ಲಿ ತೊಡಗಿದ್ದು, 2023 ರ ಕೇವಲ 20 ದಿನಗಳ ಅವಧಿಯಲ್ಲಿ 153 ಕಂಪನಿಗಳಿಂದ ಒಟ್ಟು 50,000 ಕ್ಕೂ ಅಧಿಕ ಮಂದಿ ಉದ್ಯೋಗಿಗಳು ಕೆಲಸ ಕಳೆದುಕೊಂಡಿದ್ದಾರೆ.

ಘಟಾನುಘಟಿ ಕಂಪನಿಗಳಾದ ಅಮೆಜಾನ್, ಮೈಕ್ರೋಸಾಫ್ಟ್ ಮೊದಲಾದವುಗಳು ಉದ್ಯೋಗಿಗಳನ್ನು ವಜಾಗೊಳಿಸುವ ಕಂಪನಿಗಳ ಪಟ್ಟಿಯಲ್ಲಿದ್ದು, ಇದೀಗ ಗೂಗಲ್ ಕೂಡ ಅದಕ್ಕೆ ಸೇರ್ಪಡೆಗೊಂಡಿದೆ. ಗೂಗಲ್ ಸಿಇಓ ಸುಂದರ್ ಪಿಚೈ 12,000 ಉದ್ಯೋಗಿಗಳನ್ನು ಮನೆಗೆ ಕಳುಹಿಸುವ ಅನಿವಾರ್ಯತೆ ಇದೆ ಎಂದು ಇಮೇಲ್ ಮೂಲಕ ಸಂದೇಶ ಕಳುಹಿಸಿದ್ದು ಈಗಾಗಲೇ ಪ್ರಕ್ರಿಯೆ ಜಾರಿಯಲ್ಲಿದೆ.

ಆದರೆ ಉದ್ಯೋಗಿಗಳನ್ನು ವಜಾಗೊಳಿಸುವ ವಿಧಾನದಲ್ಲಿ ಕಂಪನಿಗಳು ಅನುಸರಿಸುತ್ತಿರುವ ಮಾರ್ಗ ಈಗ ದೊಡ್ಡ ಚರ್ಚೆಗೆ ಕಾರಣವಾಗಿದೆ. 20 ವರ್ಷಗಳಿಂದ ಕೆಲಸ ಮಾಡುತ್ತಿರುವ ಉದ್ಯೋಗಿಯನ್ನು ಮೈಕ್ರೋಸಾಫ್ಟ್ ಕೇವಲ ಒಂದು ಇ-ಮೇಲ್ ಮೂಲಕ ವಜಾಗಳಿಸಿದ ಸಂದೇಶ ರವಾನಿಸಿದ್ದರೆ, ಗೂಗಲ್ 16 ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದ ಉದ್ಯೋಗಿಗೆ ಆತನ ಅಕೌಂಟ್ ಡಿ ಆಕ್ಟಿವೇಟ್ ಮಾಡುವ ಮೂಲಕ ಮನೆಗೆ ಕಳುಹಿಸಿದೆ.

ಈ ಕುರಿತಂತೆ ಅಭಿಷೇಕ್ ಎಂಬವರು ಲಿಂಕ್ಡಿನ್ ನಲ್ಲಿ ಪೋಸ್ಟ್ ಒಂದನ್ನು ಹಾಕಿದ್ದು, ಇಷ್ಟು ದೀರ್ಘಾವಧಿ ಕಾಲ ಕೆಲಸ ಮಾಡಿದ ಉದ್ಯೋಗಿಗಳನ್ನು ವಜಾಗೊಳಿಸುವಾಗ ಕಂಪನಿಗಳು ಪ್ರಾಮಾಣಿಕತೆ ತೋರದಿದ್ದರೆ ಉದ್ಯೋಗಿಗಳಿಂದ ಅದನ್ನು ನಿರೀಕ್ಷಿಸುವುದು ಏಕೆ ಎಂದು ಪ್ರಶ್ನಿಸಿದ್ದಾರೆ. ಅಲ್ಲದೆ ಮಾನವ ಸಂಪನ್ಮೂಲ ವಿಭಾಗ ಯಾವ ಮಾನದಂಡದ ಮೇಲೆ ಉದ್ಯೋಗಿಗಳನ್ನು ಮನೆಗೆ ಕಳುಹಿಸುತ್ತಿದೆ ಎಂದು ಕೇಳಿದ್ದಾರೆ.

ಇದಕ್ಕೆ ಕೆಲವರು ಸಹಮತ ವ್ಯಕ್ತಪಡಿಸಿದ್ದಾರೆ ಮತ್ತೆ ಹಲವರು ಅಪಸ್ವರ ತೆಗೆದಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ರಾಧಾ ಗುಪ್ತ ಎಂಬವರು ಕಂಪನಿ ನೀಡುವ ಮಾನದಂಡಗಳ ಆಧಾರದ ಮೇಲೆ ಮಾನವ ಸಂಪನ್ಮೂಲ ವಿಭಾಗ ಕಾರ್ಯ ನಿರ್ವಹಿಸುತ್ತದೆ ಎಂದು ಹೇಳಿದ್ದಾರೆ. ಮತ್ತೊಬ್ಬ ಬಳಕೆದಾರ ಶ್ರವಣ್ ಎಂಬುವರು ಕಾರ್ಪೊರೇಟ್ ಜಗತ್ತು ಕೇವಲ ‘ಅಗತ್ಯ’ಗಳಿಗೆ ತಕ್ಕಂತೆ ವರ್ತಿಸುತ್ತದೆ. ಉದ್ಯೋಗಿ ಎಷ್ಟು ವರ್ಷಗಳ ಕಾಲ ಕೆಲಸ ಮಾಡಿದ್ದಾನೆ ಎಂಬುದು ಅವುಗಳಿಗೆ ವಿಚಾರವಲ್ಲ ಎಂದು ತಿಳಿಸಿದ್ದಾರೆ. ಈ ಪೋಸ್ಟ್ ಈಗಾಗಲೇ 29,000 ವೀಕ್ಷಣೆಗಳನ್ನು ಕಂಡಿದ್ದು 400 ಮಂದಿ ಕಮೆಂಟ್ ಮಾಡಿದ್ದಾರೆ. ಅಲ್ಲದೆ 494 ಬಾರಿ ರೀ ಪೋಸ್ಟ್ ಆಗಿದೆ. ನೀವೂ ಕೂಡ ಇದಕ್ಕೆ ನಿಮ್ಮ ಅಭಿಪ್ರಾಯ ತಿಳಿಸಿ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read