ಸಮೂಹ ಚರ್ಚೆಗಳನ್ನು ಮಾಡುವವರಿಗೆ ಅನುವಾಗುವ ಹಾಗೆ ಹೊಸ ಅಪ್ಡೇಟ್ ಒಂದನ್ನು ವಾಟ್ಸಾಪ್ ಬಿಡುಗಡೆ ಮಾಡಿದೆ.
ಈ ಹೊಸ ಅಪ್ಡೇಟ್ ಬಳಿಕ ಸಂಪರ್ಕದ ಪಟ್ಟಿಯಲ್ಲಿಲ್ಲದವರಿಂದ ಸಂದೇಶಗಳು ಬಂದಲ್ಲಿ, ಅವರ ದೂರವಾಣಿ ಸಂಖ್ಯೆಗಳ ಬದಲಿಗೆ ಪುಶ್‌ನೇಮ್‌ಗಳನ್ನು ನೋಡಬಹುದಾಗಿದೆ.
ಕಳೆದ ವರ್ಷದ ಡಿಸೆಂಬರ್‌ನಲ್ಲಿ ಇಂಥ ಒಂದು ಅಪ್ಡೇಟ್ ತಂದಿದ್ದ ವಾಟ್ಸಾಪ್, ಗ್ರೂಪ್ ಚಾಟ್‌ಗಳಲ್ಲಿ ಫೋನ್ ನಂಬರ್‌ಗಳ ಬದಲಿಗೆ ಪುಶ್ ನೇಮ್‌ಗಳು ಗೋಚರಿಸುವಂತೆ ಹೊಸ ಫೀಚರ್ ತಂದಿತ್ತು. ಈ ಮೂಲಕ ಪರಿಚಯವಿಲ್ಲದ ಸಂಪರ್ಕಗಳಿಂದ ಗ್ರೂಪ್‌ನಲ್ಲಿ ಮೆಸೇಜ್‌ಗಳು ಬಂದಾಗಲೂ ಗುರುತು ಹಿಡಿಯುವುದು ಸುಲಭವಾಗಿತ್ತು.
ಇದೇ ಫೀಚರ್‌ಗೆ ಇನ್ನಷ್ಟು ನವೀಕರಣ ಮಾಡಿರುವ ವಾಟ್ಸಾಪ್ ಚಾಟ್ ಪಟ್ಟಿಗೂ ಸಹ ಈ ತಂತ್ರಾಂಶವನ್ನು ಲೇಪಿಸಿದ್ದು, ಗ್ರೂಪ್ ಚಾಟ್ ಮೂಲಕ ತಮಗೆ ಸಂದೇಶ ಕಳುಹಿಸುವವರು ಯಾರೆಂದು ಬಳಕೆದಾರರಿಗೆ ಈ ಮೂಲಕ ತಿಳಿಯುತ್ತದೆ.
ಇದರಿಂದಾಗಿ ಅಪರಿಚಿತ ಕಾಂಟಾಕ್ಟ್‌ನಿಂದ ಬರುವ ಸಂದೇಶಗಳನ್ನು ಯಾರು ಕಳುಹಿಸಿದ್ದಾರೆ ಎಂದು ತಿಳಿಯಲು ಆ ಸಂಖ್ಯೆಗಳನ್ನು ಸೇವ್ ಮಾಡಬೇಕಾದ ಅಗತ್ಯವಿರುವುದಿಲ್ಲ.
ಸದ್ಯದ ಮಟ್ಟಿಗೆ ಆಂಡ್ರಾಯ್ಡ್ ಬಳಕೆದಾರರಿಗೆ ವಾಟ್ಸಾಪ್‌ನ 2.23.5.12 ವರ್ಶನ್‌ನಲ್ಲಿ ಈ ಫೀಚರ್ ಲಭ್ಯವಿದೆ. ಹಾಗೇ ಐಓಎಸ್ ಬಳಕೆದಾರರಿಗೆ ವಾಟ್ಸಾಪ್‌ನ 23.5.0.73 ಅಪ್ಡೇಟ್‌ನಲ್ಲಿ ಈ ಫೀಚರ್ ಸಿಗಲಿದೆ. ಸದ್ಯಕ್ಕೆ ವಾಟ್ಸಾಪ್ ಬಿಟಾ ವರ್ಶನ್‌ನಲ್ಲಿ ಮಾತ್ರವೇ ಲಭ್ಯವಿರುವ ಈ ಫೀಚರ್ ಅನ್ನು ಮುಂದಿನ ದಿನಗಳಲ್ಲಿ ಹೊಸ ಅಪ್ಡೇಟ್‌ಗಳ ಮೂಲಕ ಎಲ್ಲ ಬಳಕೆದಾರರಿಗೂ ಲಭ್ಯವಾಗಲಿದೆ.
ಮತ್ತೊಂದು ಹೊಸ ಅಪ್ಡೇಟ್ ಮೂಲಕ ಗ್ರೂಪ್ ಅಡ್ಮಿನ್‌ಗಳಿಗೆ ಇನ್ನಷ್ಟು ಕಂಟ್ರೋಲ್ ನೀಡಲು ಹೊರಟಿದೆ ವಾಟ್ಸಾಪ್. ಸದ್ಯಕ್ಕೆ ಈ ಫೀಚರ್ ಸಹ ಬಿಟಾ ವರ್ಶನ್‌ನಲ್ಲಿ ಲಭ್ಯವಿದೆ. ಪ್ರತಿ ಬಾರಿ ಹೊಸ ಸದಸ್ಯರೊಬ್ಬರು ಗ್ರೂಪ್ ಸೇರುವ ಆಮಂತ್ರಣದ ಲಿಂಕ್ ಬಳಸಿದಾಗಲೂ ಗ್ರೂಪ್‌ನ ಪ್ರತಿಯೊಬ್ಬ ಸದಸ್ಯರಿಗೂ ಈ ವಿಚಾರ ಮುಟ್ಟುತ್ತದೆ. ಇದರಿಂದಾಗಿ ಗ್ರೂಪ್‌ಗಳಿಗೆ ಯಾರು ಸೇರಬಹುದು ಎಂಬ ಬಗ್ಗೆ ಅಡ್ಮಿನ್‌ಗಳಿಗೆ ಇನ್ನಷ್ಟು ನಿಯಂತ್ರಣ ಸಿಗಲಿದೆ.