ನಾವು ಸತ್ತ ಬಳಿಕ ನಮ್ಮ ಫೇಸ್ಬುಕ್ ಖಾತೆಗಳು ಏನಾಗಬಹುದು ಎಂಬ ಕುತೂಹಲ ಎಲ್ಲರಿಗೂ ಇದ್ದಿದ್ದೇ. ಒಂದು ವೇಳೆ ನೀವು ಮೃತಪಟ್ಟರೆ ನಿಮ್ಮ ಫೇಸ್ಬುಕ್ ಖಾತೆ ತನ್ನಿಂತಾನೇ ಡಿಲೀಟ್ ಆಗಿ, ಸಾಮಾಜಿಕ ಜಾಲತಾಣದಲ್ಲಿ ನಿಮ್ಮ ಹೆಜ್ಜೆ ಗುರುತುಗಳೇ ಇಲ್ಲದಂತೆ ಮಾಡಲು ಮೆಟಾ ಸಂಸ್ಥೆಯು ಅವಕಾಶ ನೀಡಿದೆ.
“ಒಂದು ವೇಳೆ ನೀವು ಮೃತಪಟ್ಟರೆ ನಿಮ್ಮ ಖಾತೆಯನ್ನು ಶಾಶ್ವತವಾಗಿ ಡಿಲೀಟ್ ಮಾಡುವ ಆಯ್ಕೆಯನ್ನು ನಿಮಗೆ ಕೊಟ್ಟಿದ್ದೇವೆ. ಅಂದರೆ, ನೀವು ಇನ್ನಿಲ್ಲವಾಗಿದ್ದೀರಿ ಎಂದು ನಮಗೆ ಯಾರಾದರೂ ಹೇಳಿದರೆ, ನಿಮ್ಮೆಲ್ಲಾ ಸಂದೇಶಗಳು, ಫೋಟೋಗಳು, ಪೋಸ್ಟ್‌ಗಳು, ಕಾಮೆಂಟ್‌ಗಳು, ಪ್ರತಿಕ್ರಿಯೆಗಳು ಹಾಗೂ ವೈಯಕ್ತಿಕ ಮಾಹಿತಿ ಸೇರಿದಂತೆ ಎಲ್ಲವನ್ನೂ ಫೇಸ್ಬುಕ್‌ನಿಂದ ಶಾಶ್ವತವಾಗಿ ತೆರವುಗೊಳಿಸುತ್ತೇವೆ. ನಿಮ್ಮ ಹೆಸರಿನಲ್ಲಿರುವ ಎಲ್ಲ ಖಾತೆಗಳನ್ನೂ ಡಿಲೀಟ್ ಮಾಡುತ್ತೇವೆ,” ಎಂದು ಇದಕ್ಕೆಂದೇ ಇರುವ ಫೇಸ್ಬುಕ್‌ನ ಮೀಸಲು ಪುಟವೊಂದು ತಿಳಿಸುತ್ತದೆ.
ಇದಕ್ಕೆ ಪರ್ಯಾಯವಾಗಿ, ನಿಮ್ಮ ’ಸ್ಮರಣಾರ್ಥ’ವಾಗಿ ಒಂದು ಪ್ರೊಫೈಲ್ ತೆರೆದು, ಅದಕ್ಕೆಂದು ’ಲಿಗ್ಯಾಸಿ ಸಂಪರ್ಕ’ದ ಮೂಲಕ ನಿಮ್ಮ ಕುರಿತಂತೆ ನಿಮ್ಮ ಮಿತ್ರರು ಹಾಗೂ ಬಂಧುಗಳು ನೆನಪಿನ ಪೋಸ್ಟ್‌ಗಳನ್ನು ಶೇರ್ ಮಾಡಿಕೊಳ್ಳಬಹುದಾಗಿದೆ. ನಿಮ್ಮ ಪ್ರೊಫೈಲ್‌ಗೆ ’ರಿಮೆಂಬರಿಂಗ್’ ಎಂಬ ಶಬ್ದವನ್ನು ಸೇರಿಸಲಾಗುತ್ತದೆ.
ನಿಮ್ಮ ಕಾಲವಾದ ಬಳಿಕ ನಿಮ್ಮ ಕಾಂಟಾಕ್ಟ್ ಲಿಸ್ಟ್‌ನಲ್ಲಿರುವ ನಿಮ್ಮ ಬಂಧುಗಳು ಅಥವಾ ಮಿತ್ರರಿಗೆ ನಿಮ್ಮ ಹೆಸರಿನಲ್ಲಿ ಲಿಗ್ಯಾಸಿ ಖಾತೆ ನಿರ್ವಹಿಸಲು ಫೇಸ್ಬುಕ್ ಕೋರಿಕೊಳ್ಳುತ್ತದೆ.