ಉತ್ತರ ದೆಹಲಿಯಲ್ಲಿ ವಾಸವಿರುವ 35 ವರ್ಷದ ವಕೀಲೆಯೊಬ್ಬರು ಇತ್ತಿಚಿಗೆ ಸಿಮ್ ಸ್ವಾಪ್ ಎಂಬ ಹೊಸ ಸೈಬರ್ ಕ್ರೈಮ್ ಜಾಲದ ಬಲಿಪಶುವಾಗಿದ್ದಾರೆ. ಯಾವುದೋ ಒಂದು ಅನಾಮಧೇಯ ವ್ಯಕ್ತಿಯಿಂದ ಮೂರು ಮಿಸ್ಡ್ ಕಾಲ್ ಸ್ವೀಕರಿಸಿದ ಬಳಿಕ ವಕೀಲೆಯ ಬ್ಯಾಂಕ್ ಖಾತೆಯಿಂದ ದೊಡ್ಡ ಮೊತ್ತದ ಹಣ ಡೆಬಿಟ್ ಆಗಿದೆ ಎನ್ನಲಾಗಿದೆ. ಇಲ್ಲಿ ಗಮನಿಸಬೇಕಾದ ವಿಚಾರ ಏನೆಂದರೆ ವಕೀಲರು ಬ್ಯಾಂಕ್ ವಿವರ ಅಥವಾ ಒಟಿಪಿ ಹೀಗೆ ಯಾವುದೇ ಮಾಹಿತಿಯನ್ನು ಸೈಬರ್ ವಂಚಕರೊಂದಿಗೆ ಹಂಚಿಕೊಂಡಿರಲಿಲ್ಲ.
ವಕೀಲೆ ಈ ಕರೆಗಳನ್ನು ರಿಸೀವ್ ಕೂಡ ಮಾಡಿರಲಿಲ್ಲ. ಆದರೂ ವಕೀಲನ ಖಾತೆಯಿಂದ ಹಣ ಮಾತ್ರ ಡೆಬಿಟ್ ಆಗಿತ್ತು. ಸೈಬರ್ ವಂಚಕರು ಎಷ್ಟು ಹಣ ದೋಚಿದ್ದಾರೆ ಎಂಬ ಮಾಹಿತಿಯನ್ನು ರಹಸ್ಯವಾಗಿ ಇಡಲಾಗಿದೆ. ಆದರೆ ವರದಿಗಳ ಪ್ರಕಾರ ಲಕ್ಷಗಳ ಮೊತ್ತದಲ್ಲಿ ವಕೀಲರು ತಮ್ಮ ಹಣವನ್ನು ಕಳೆದುಕೊಂಡಿದ್ದಾರೆ ಎನ್ನಲಾಗಿದೆ.
ಈ ರೀತಿಯ ಸೈಬರ್ ಕ್ರೈಂ ಹೇಗೆ ನಡೆಯುತ್ತದೆ..?
ವಕೀಲರಿಗೆ ಅಪರಿಚಿತ ಮೊಬೈಲ್ ಸಂಖ್ಯೆಯಿಂದ ಮೂರು ಮಿಸ್ಡ್ ಕಾಲ್ ಬಂದಿತ್ತು. ಯಾವುದೇ ಕರೆಯನ್ನು ವಕೀಲೆ ಸ್ವೀಕರಿಸಿರಲಿಲ್ಲ. ಆದರೆ ಅವರು ತಮ್ಮ ಇನ್ನೊಂದು ಮೊಬೈಲ್ ಸಂಖ್ಯೆಯಿಂದ ಇದೇ ನಂಬರ್ಗೆ ಕರೆ ಮಾಡಿದ್ದರು. ಆದು ಸೈಬರ್ ವಂಚಕ ತನ್ನನ್ನು ತಾನು ಕೋರಿಯರ್ ಸೇವೆಯ ಕಸ್ಟಮರ್ ಕೇರ್ ಸಿಬ್ಬಂದಿ ಎಂದು ಪರಿಚಯಿಸಿಕೊಂಡಿದ್ದ ಎನ್ನಲಾಗಿದೆ. ಕೊರಿಯರ್ ತಲುಪಿಸಲು ನಿಮ್ಮ ವಿಳಾಸ ಬೇಕು ಎಂದಾಗ ವಕೀಲೆ ವಿವರ ನೀಡಿದ್ದಾರೆ. ಅಲ್ಲದೇ ಕೊರಿಯರ್ ಕೂಡ ಸ್ವೀಕರಿಸಿದ್ದಾರೆ ಎನ್ನಲಾಗಿದೆ. ಇದಾದ ಬಳಿಕ ಅವರ ಬ್ಯಾಂಕ್ ಖಾತೆಯಿಂದ ಹಣ ಕಟ್ ಆಗಿದೆ ಎನ್ನಲಾಗಿದೆ. ಈ ಸಂಬಂಧ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಏನಿದು ಸಿಮ್ ಸ್ವಾಪ್ ಪ್ರಕರಣ..?
ಇತ್ತೀಚಿನ ದಿನಗಳಲ್ಲಿ ಸಿಮ್ ಸ್ವಾಪ್ ಪ್ರಕರಣಗಳು ಹೆಚ್ಚುತ್ತಿವೆ. ಸೈಬರ್ ವಂಚಕರು ತಮ್ಮ ನಿಯಂತ್ರಣದಲ್ಲಿರುವ ಸಿಮ್ ಕಾರ್ಡ್ನಿಂದ ವಂಚನೆಗೆ ಒಳಗಾಗುವ ಸಿಮ್ನ್ನು ಸಂಯೋಜಿಸುತ್ತಾರೆ. ವೈಯಕ್ತಿಕ ಮಾಹಿತಿಯನ್ನು ಪಡೆದ ಬಳಿಕ ಸೈಬರ್ ವಂಚಕರು ಮೊಬೈಲ್ ಆಪರೇಟರ್ ರಿಟೇಲ್ ಔಟ್ಲೆಟ್ಗೆ ಭೇಟಿ ನೀಡುತ್ತಾರೆ. ಇಲ್ಲಿ ನಕಲಿ ಐಡಿ ಪುರಾವೆ ನೀಡಿ ತಮ್ಮ ಸಿಮ್ ಹಾಳಾಗಿದೆ ಎಂದು ನಾಟಕ ಮಾಡಿ ನಕಲಿ ಸಿಮ್ ಪಡೆದು ಬಳಿಕ ವಂಚನೆ ಎಸಗುತ್ತಾರೆ ಎನ್ನಲಾಗಿದೆ.