
ಹಾವೇರಿ: ಮಳೆ ಅಬ್ಬರದಿಂದ ಸೃಷ್ಟಿಯಾಗುತ್ತಿರುವ ಅವಾಂತರಗಳು ಒಂದೆರಡಲ್ಲ. ಧರಿಸುವ ಬಟ್ಟೆ ಒಣಗಿಸುವುದೇ ಒಂದು ದೊಡ್ಡ ಸಾಹಸದ ಕೆಲಸ. ಅದರಲ್ಲೂ ವಸತಿ ಶಾಲೆ, ಹಾಸ್ಟೇಲ್ ಗಳಲ್ಲಿರುವ ವಿದ್ಯಾರ್ಥಿಗಳ ಪಾಡು ಹೇಳಲು ಸಾಧ್ಯವಿಲ್ಲ.
ಡೆಂಗ್ಯೂ ಪ್ರಕರಣ ಹೆಚ್ಚಳದ ನಡುವೆ ಇದೀಗ ಹೊಸ ಸಮಸ್ಯೆ ಆರಂಭವಾಗಿದ್ದು, ಹಾವೇರಿ ಜಿಲ್ಲೆಯ ವಸತಿ ಶಾಲೆಯ ಮಕ್ಕಳಲ್ಲಿ ಫಂಗಸ್ ಕಾಣಿಸಿಕೊಳ್ಳುತ್ತಿದೆ. ಕಾರಣ ಒದ್ದೆ ಬಟ್ಟೆ.
ಹಾವೇರಿ ತಾಲೂಕಿನ ಕಬ್ಬೂರು ಗ್ರಾಮದ ಡಾ.ಬಿ.ಆರ್.ಅಂಬೇಡ್ಕರ್ ಸರ್ಕಾರಿ ಮೆಟ್ರಿಕ್ ಪೂರ್ವ ಬಾಲಕರ ವಸತಿ ನಿಲಯದ ವಿದ್ಯಾರ್ಥಿಗಳು ಫಂಗಸ್ ನಿಂದ ಬಳಲುತ್ತಿದ್ದಾರೆ. ಹಾವೇರಿಯಲ್ಲಿ ಕಳೆದ 20 ದಿನಗಳಿಂದ ಭಾರಿ ಮಳೆಯಾಗುತ್ತಿದ್ದು, ವಸತಿ ಶಾಲೆಯ ಮಕ್ಕಳಿಗೆ ಬಟ್ಟೆ ಒಣಗಿಸುವುದು ಸಾಧ್ಯವಾಗುತ್ತಿಲ್ಲ. ಬಟ್ಟೆ ಒಣಗದ ಕಾರಣ ಹಸಿ ಬಟ್ಟೆ ತೊಟ್ಟು ವಿದ್ಯಾರ್ಥಿಗಳು ಶಾಲೆಗೆ ತೆರಳುತ್ತಿದ್ದು, ಇದರಿಂದ ಫಂಗಸ್ ಸಮಸ್ಯೆ ಕಾಣಿಸಿಕೊಳ್ಳುತ್ತಿದೆ.
ವಿದ್ಯಾರ್ಥಿಗಳ ಮೈಮೇಲೆ ಗುಳ್ಳೆಗಳು ಏಳುತ್ತಿದ್ದು, ತುರಿಕೆ ಕಾಣಿಸಿಕೊಳ್ಳುತ್ತಿದೆ. 32 ವಿದ್ಯಾರ್ಥಿಗಳಲ್ಲಿ ಫಂಗಸ್ ಕಾಣಿಸಿಕೊಂಡಿದ್ದು, ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ವಿದ್ಯಾರ್ಥಿಗಳನ್ನು ಪ್ರತ್ಯೇಕ ಕೊಠಡಿಯಲ್ಲಿ ಇರಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಇಬ್ಬರು ವಿದ್ಯಾರ್ಥಿಗಳಲ್ಲಿ ಗಂಭೀರವಾದ ಫಂಗಸ್ ಲಕ್ಷಣಗಳು ಕಂಡುಬಂದಿದೆ. ಓರ್ವ ವಿದ್ಯಾರ್ಥಿಯನ್ನು ಊರಿಗೆ ಕಳುಹಿಸಲಾಗಿದ್ದು, ಒನ್ನೋರ್ವ ವಿದ್ಯಾರ್ಥಿಗೆ ಚಿಕಿತ್ಸೆ ಮುಂದುವರೆದಿದೆ.