ಪಂಜಾಬ್‌ನ ಲುಧಿಯಾನದಲ್ಲಿನ ಐಷಾರಾಮಿ ವಸತಿ ಪ್ರದೇಶದಲ್ಲಿ ಚಿರತೆ ಕಾಣಿಸಿಕೊಂಡು ನಿವಾಸಿಗಳಲ್ಲಿ ಆತಂಕ ಹುಟ್ಟುಹಾಕಿತ್ತು. ವಸತಿ ಪ್ರದೇಶದಲ್ಲಿ ಚಿರತೆ ಓಡಾಡುತ್ತಿರುವ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಶುಕ್ರವಾರ ಡಿಸೆಂಬರ್ 8 ರಂದು, ಪತ್ರಕರ್ತ ಗಗನ್‌ದೀಪ್ ಸಿಂಗ್ ಅವರು ಸಿಸಿ ಕ್ಯಾಮೆರಾ ದೃಶ್ಯಗಳನ್ನು ತಮ್ಮ ಟ್ವಿಟರ್ ಖಾತೆಯಲ್ಲಿ ಪೋಸ್ಟ್ ಮಾಡಿ ಆತಂಕ ವ್ಯಕ್ತಪಡಿಸಿದ್ದರು.
“ಚಿರತೆಯೊಂದು ಲುಧಿಯಾನದ ಪಕ್ಹೋವಲ್ ರಸ್ತೆಯಲ್ಲಿರುವ ಸೆಂಟ್ರಲ್ ಗ್ರೀನ್ ಸೊಸೈಟಿಯಲ್ಲಿ ಕಾಣಿಸಿಕೊಂಡಿದೆ. ಸೊಸೈಟಿಯಲ್ಲಿ ವಾಸವಾಗಿರುವ ವ್ಯಕ್ತಿಯೊಬ್ಬರು ಚಿರತೆಯನ್ನ ನೋಡಿದ್ದಾರೆ. ಚಿರತೆ ಓಡಾಟದ ದೃಶ್ಯಗಳು ಅಲ್ಲಿ ಅಳವಡಿಸಲಾಗಿದ್ದ ಕ್ಯಾಮೆರಾಗಳಲ್ಲಿ ಸೆರೆಯಾಗಿವೆ. ಈ ಬಗ್ಗೆ ಮಾಹಿತಿ ಪಡೆದ ಸದರ್ ಠಾಣೆ ಪೊಲೀಸರು ಸ್ಥಳಕ್ಕೆ ಧಾವಿಸಿ ಪ್ರದೇಶವನ್ನು ಸೀಲ್ ಮಾಡಿದ್ದಾರೆ. ಚಿರತೆ ಹಿಡಿಯಲು ಅರಣ್ಯ ಇಲಾಖೆ ಪ್ರಯತ್ನ ನಡೆಸುತ್ತಿದೆ. ಪ್ರಸ್ತುತ ಪ್ರದೇಶವನ್ನು ಪರಿಶೀಲಿಸಲಾಗುತ್ತಿದೆ ಎಂದು ಸದರ್ ಪೊಲೀಸ್ ಠಾಣೆಯ ಎಸ್‌ಎಚ್‌ಒ ಗುರುಪ್ರೀತ್ ಸಿಂಗ್ ಹೇಳಿದ್ದಾರೆ” ಎಂದು ಅವರು ತಮ್ಮ ಪೋಸ್ಟ್ ನಲ್ಲಿ ತಿಳಿಸಿದ್ದಾರೆ.
ಸೊಸೈಟಿಯ ಆಡಳಿತವು ಜಿಲ್ಲಾಡಳಿತಕ್ಕೆ ಮಾಹಿತಿ ನೀಡಿದ ನಂತರ ಅರಣ್ಯ ಇಲಾಖೆಯ ತಂಡವು ಪ್ರದೇಶವನ್ನು ಪರಿಶೀಲಿಸಿದೆ ಆದರೆ ಚಿರತೆಯ ಕುರುಹು ಕಂಡುಬಂದಿಲ್ಲ ಎಂದು ಲುಧಿಯಾನಾ ವ್ಯಾಪ್ತಿಯ ಅರಣ್ಯ ಮತ್ತು ವನ್ಯಜೀವಿ ಅಧಿಕಾರಿಗಳು ತಿಳಿಸಿದ್ದಾರೆ. ಸೊಸೈಟಿ ನಿವಾಸಿಗಳು ತುರ್ತು ಸಂದರ್ಭ ಹೊರತುಪಡಿಸಿ ಹೊರಗೆ ಬರದಂತೆ ಅವರನ್ನು ವಿನಂತಿಸಿಕೊಳ್ಳಲಾಗಿದ್ದು, ಚಿರತೆ ಸೆರೆಗೆ ಬೋನ್ ಹಾಕಲಾಗಿದೆ.