ಹೈದರಾಬಾದ್: ಕುದುರೆ ಮೇಲೆ ಹೋಗಿ ಜೊಮ್ಯಾಟೋ ಫುಡ್ ಡೆಲಿವರಿ ಆಹಾರ ತಲುಪಿಸಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಹಿಟ್ ಅಂಡ್ ರನ್ ಹೊಸ ಕಾನೂನು ವಿರೋಧಿಸಿ ದೇಶಾದ್ಯಂತ ಚಾಲಕರು ಕೈಗೊಂಡಿದ್ದ ಮುಷ್ಕರದ ಕಾರಣ ಕೆಲವು ಪೆಟ್ರೋಲ್ ಪಂಪ್ ಗಳಲ್ಲಿ ಇಂಧನ ತುಂಬಿಸಿಕೊಳ್ಳಲು ಉದ್ದನೆಯ ಸರತಿ ಸಾಲು ಕಂಡುಬಂದಿತ್ತು. ಇಂತಹ ಸಂದರ್ಭದಲ್ಲಿ ಆಹಾರ ಆರ್ಡರ್ ಮಾಡಿದ ಗ್ರಾಹಕರಿಗೆ ಜೊಮ್ಯಾಟೋ ಫುಡ್ ಡೆಲಿವರಿ ಕಂಪನಿಯ ಏಜೆಂಟ್ ಗೆ ಆಹಾರ ತಲುಪಿಸಲು ಇಂಧನ ಕೊರತೆಯ ಕಾರಣ ಸಾಧ್ಯವಾಗಿಲ್ಲ.
ಹೀಗಾಗಿ ಉಪಾಯ ಕಂಡು ಕೊಂಡ ಆತ ಕುದುರೆ ಮೇಲೆ ಸವಾರಿ ಮಾಡಿದ್ದಾರೆ. ಹೈದರಾಬಾದ್ ನ ಚಂಚಲಗುಡದ ಇಂಪೀರಿಯಲ್ ಹೋಟೆಲ್ ಬಳಿ ಈ ಘಟನೆ ನಡೆದಿದೆ. ಆಹಾರ ವಿತರಣಾ ವ್ಯಕ್ತಿ ಜೊಮ್ಯಾಟೋ ಕೆಂಪು ಟೀ-ಶರ್ಟ್ ಧರಿಸಿ ಬ್ಯಾಗ್ ನೊಂದಿಗೆ ಕುದುರೆ ಮೇಲೆ ಜನನಿಬಿಡ ರಸ್ತೆಯಲ್ಲಿ ತೆರಳಿದ್ದಾರೆ. ಅವರು ಆಹಾರ ವಿತರಿಸಲು ಕುದುರೆ ಮೇಲೆ ತೆರಳುತ್ತಿರುವ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.