ಜೈಪುರ: ಜೈಪುರದಲ್ಲಿ ನಾಯಿಗಳಿಗಾಗಿ ಅತಿ ದೊಡ್ಡ ‘ಕೆಸಿಐ ಚಾಂಪಿಯನ್‌ಶಿಪ್ ಶೋ’ ನಡೆಯಿತು. ಈ ಪ್ರದರ್ಶನದಲ್ಲಿ ವಿಶ್ವದ ಅತಿದೊಡ್ಡ ಕೇಕ್ ತಯಾರಿಸಲಾಗಿದೆ. ಬೀದಿ ನಾಯಿಗಳ ಬಗ್ಗೆ ಜಾಗೃತಿ ಮೂಡಿಸಲು ಅವುಗಳಿಗಾಗಿ 160 ಕೆಜಿ ಮೂಳೆ ಆಕಾರದ ಕೇಕ್ ರೆಡಿ ಮಾಡಲಾಗಿದ್ದು ಇದರ ವಿಡಿಯೋ ವೈರಲ್ ಆಗಿದೆ.
ಈ ಇಡೀ ಕೇಕ್ ಅನ್ನು ಜೈಪುರದ ಬೀದಿ ನಾಯಿಗಳಿಗೆ ಹಂಚಲಾಯಿತು. ಈ ಮೂಲಕ ಬೀದಿ ನಾಯಿಗಳು ಕೂಡ ತಳಿ ನಾಯಿಗಳ ಪ್ರೀತಿಗೆ ಅರ್ಹವಾಗಿವೆ ಎಂದು ಜನರಿಗೆ ಅರಿವು ಮೂಡಿಸಲಾಯಿತು.
ಇದು ಎರಡು ವಿಶ್ವ ದಾಖಲೆಗಳಿಗೆ ಸಾಕ್ಷಿಯಾಯಿತು. ಓವನ್ ದಿ ಬೇಕರಿಯ ಬಾಣಸಿಗ ಮಯಾಂಕ್ ಗೋಪಾಲಿಯಾ ಮತ್ತು ಅರ್ಬಿಂದ್ ಶರ್ಮಾ ಅವರು 8 ಗಂಟೆಗಳಲ್ಲಿ 160 ಕೆಜಿ ಕೇಕ್ ಅನ್ನು ಸಿದ್ಧಪಡಿಸಿದರು. ಬೀದಿ ನಾಯಿಗಳ ಉತ್ತಮ ಆಹಾರವನ್ನು ಗಮನದಲ್ಲಿಟ್ಟುಕೊಂಡು ಕಡಲೆಕಾಯಿ ಬೆಣ್ಣೆ ಮತ್ತು ಮೊಟ್ಟೆಗಳನ್ನು ಸೇರಿಸಲಾಯಿತು.
ಚಾಂಪಿಯನ್‌ಶಿಪ್‌ನಲ್ಲಿ ಜಪಾನ್‌ನ ಟೊಮೊನೊರಿ ಐಜಾವಾ ಮತ್ತು ಫಿಲಿಪೈನ್ಸ್‌ನ ಸೈಮನ್ ಸಿಮ್ ತೀರ್ಪುಗಾರರಾಗಿದ್ದರು. ರಾಜಸ್ಥಾನದಲ್ಲಿ ನಡೆದ ಶ್ವಾನ ಪ್ರದರ್ಶನದಲ್ಲಿ ಅಂತಾರಾಷ್ಟ್ರೀಯ ತೀರ್ಪುಗಾರರು ಭಾಗವಹಿಸಿದ್ದು ಇದೇ ಮೊದಲು. ದೆಹಲಿ, ಹರಿಯಾಣ, ರಾಜಸ್ಥಾನ, ಮಧ್ಯಪ್ರದೇಶ, ಪಂಜಾಬ್, ಗುಜರಾತ್ ಸೇರಿದಂತೆ ಹಲವು ರಾಜ್ಯಗಳ ಶ್ವಾನಗಳು ಪ್ರದರ್ಶನದಲ್ಲಿ ಭಾಗವಹಿಸಿದ್ದವು.
ಸ್ಪರ್ಧೆಯಲ್ಲಿ, ತೀರ್ಪುಗಾರರು ನಾಯಿಯ ನಡಿಗೆ, ಜಿಗಿತ, ಎತ್ತರ ಮತ್ತು ಹೊಂದಾಣಿಕೆಯ ಆಧಾರದ ಮೇಲೆ ಅಂಕಗಳನ್ನು ನೀಡುತ್ತಾರೆ. ಸೈಬೀರಿಯನ್ ಹಸ್ಕಿ, ಅಮೆರಿಕನ್ ಅಕಿತಾ, ಫ್ರೆಂಚ್ ಬುಲ್ಡಾಗ್, ಶಿಟ್ಜು ಮತ್ತು ಟಾಯ್ ಪೊಮ್ ಮುಂತಾದ ಅನೇಕ ವಿಶಿಷ್ಟ ತಳಿಗಳನ್ನು ಪ್ರದರ್ಶನದಲ್ಲಿ ಸೇರಿಸಲಾಯಿತು.