ಸಾಕು ಪ್ರಾಣಿಗಳನ್ನು ಮನೆಗೆ ತಂದಾಗ ಅವುಗಳನ್ನು ಮನೆಯ ಸದಸ್ಯರಂತೆಯೇ ಪರಿಗಣಿಸಲಾಗುತ್ತದೆ. ಆದರೆ ಇವುಗಳ ನಿರ್ವಹಣೆಯೂ ಸಹ ಅಷ್ಟೇ ಮುಖ್ಯವಾಗುತ್ತದೆ. ಮಾತು ಬಾರದ ಮೂಕ ಪ್ರಾಣಿಗಳು ತಮ್ಮ ನೋವು, ಸಂಕಷ್ಟಗಳನ್ನು ಹೇಳಿಕೊಳ್ಳಲು ಸಾಧ್ಯವಾಗದ ಕಾರಣ ಅವುಗಳನ್ನು ಮಾಲೀಕರೇ ಅರ್ಥೈಸಿಕೊಳ್ಳಬೇಕಾಗುತ್ತದೆ.
ಈ ಪ್ರಾಣಿಗಳಿಗೆ ಊಟ, ತಿಂಡಿ ನೀಡಿದರಷ್ಟೇ ಸಾಲದು ಅವುಗಳ ಸುರಕ್ಷತೆಯ ಕುರಿತು ಸಹ ಕಾಳಜಿ ವಹಿಸಬೇಕಾಗುತ್ತದೆ. ಹೀಗೆ ತನ್ನ ನಾಯಿಯನ್ನು ವಾಕಿಂಗ್ ಕರೆದುಕೊಂಡು ಹೋಗಲು ಲಿಫ್ಟ್ ಮೂಲಕ ಪುಟ್ಟ ಬಾಲಕನೊಬ್ಬ ಹೋದ ವೇಳೆ ನಡೆಯುತ್ತಿದ್ದ ದೊಡ್ಡ ಅವಘಡವೊಂದು ಸ್ವಲ್ಪದರಲ್ಲೇ ತಪ್ಪಿದೆ. ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
11 ವರ್ಷದ ಈ ಬಾಲಕ ಚೈನ್ ಹಾಕಿದ್ದ ತನ್ನ ನಾಯಿಯನ್ನು ಲಿಫ್ಟ್ ಮೂಲಕ ಕೆಳಗೆ ಕರೆದುಕೊಂಡು ಹೋಗಲು ಮುಂದಾಗಿದ್ದಾನೆ. ಈ ವೇಳೆ ಬಾಲಕ ಹಾಗೂ ನಾಯಿ ಲಿಫ್ಟ್ ಒಳಗೆ ಹೋದರೂ ಸಹ ನಾಯಿಗೆ ಹಾಕಿದ್ದ ಜೈನ್ ಲಿಫ್ಟ್ ಹೊರಗಡೆಗೆ ಉಳಿದುಕೊಂಡಿದೆ. ಬಟನ್ ಪ್ರೆಸ್ ಮಾಡಿದಾಗ ಲಿಫ್ಟ್ ಚಲಿಸಲು ಆರಂಭಿಸಿದೆ. ಆಗ ನಾಯಿ ಕುತ್ತಿಗೆ ಬಿಗಿಯಲು ಆರಂಭಿಸಿದೆ.
ಕ್ಷಣಾರ್ಧದಲ್ಲಿ ನಡೆದ ಈ ಘಟನೆಯಿಂದ ಪುಟ್ಟ ಬಾಲಕ ಒಂದು ಕ್ಷಣ ಕಕ್ಕಾಬಿಕ್ಕಿಯಾದರೂ ತಕ್ಷಣವೇ ಸಮಯ ಪ್ರಜ್ಞೆ ಮೆರೆದು ತನ್ನ ನಾಯಿಯನ್ನು ಎತ್ತಿ ಹಿಡಿದಿದ್ದಾನೆ. ಇದರಿಂದಾಗಿ ನಾಯಿಯ ಕುತ್ತಿಗೆ ಬಿಗಿಯುವುದು ತಪ್ಪಿದ್ದು, ಲಿಫ್ಟ್ ಮೇಲೆ ಹೋದಾಗ ಚೈನ್ ತುಂಡರಿಸಿ ನಾಯಿಯ ಪ್ರಾಣ ಉಳಿದಿದೆ. ಈ ವಿಡಿಯೋ ವೀಕ್ಷಿಸಿದ ನೆಟ್ಟಿಗರು ಬಾಲಕನ ಸಮಯ ಪ್ರಜ್ಞೆಗೆ ಶಭಾಷ್ ಎಂದಿದ್ದಾರೆ.