ಶಿವಮೊಗ್ಗ: ವಿಶ್ವೇಶ್ವರಯ್ಯ ಕಬ್ಬಿಣ ಮತ್ತು ಉಕ್ಕು ಕಾರ್ಖಾನೆ ಉಳಿಸಲು ಎಲ್ಲ ಪ್ರಯತ್ನ ಮಾಡಲಾಗುವುದು ಹಾಗೂ ಇದಕ್ಕೆ ಎಲ್ಲರ ಸಹಕಾರ ಅಗತ್ಯವಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಅವರು ಇಂದು ತಮ್ಮನ್ನು ಭೇಟಿ ಮಾಡಿದ ವಿಐಎಸ್ಎಲ್ ಕಾರ್ಮಿಕರ ನಿಯೋಗದೊಂದಿಗೆ ಮಾತನಾಡಿದರು.
ವಿಐಎಸ್ಎಲ್ ಅತ್ಯಂತ ಮಹತ್ವದ ಕಾರ್ಖಾನೆ. ಜಾಗತೀಕರಣದ ಪರಿಣಾಮ ಅನೇಕ ಸಾರ್ವಜನಿಕ ಸಂಸ್ಥೆಗಳು ಮುಚ್ಚಿವೆ. ವಿಐಎಸ್ಎಲ್ ಕಾರ್ಖಾನೆಯು ಬಿ.ಎಸ್. ಯಡಿಯೂರಪ್ಪ ಅವರ ಪ್ರಯತ್ನದಿಂದ ಉಳಿದುಕೊಂಡು ಬಂದಿದೆ ಎಂದರು.
ಕಾರ್ಖಾನೆ ಮುಚ್ಚುವ ಪ್ರಕ್ರಿಯೆ ನಿಲ್ಲಿಸಲು ಪ್ರಯತ್ನ
ಕೇಂದ್ರ ಸರ್ಕಾರ ಡಿಸ್ ಇನ್ವೆಸ್ಟ್ ಮೆಂಟ್ ಯೊಜನೆ ಅಡಿಯಲ್ಲಿ ಈ ಕಾರ್ಖಾನೆ ಮುಚ್ಚಲು ಪ್ರಕ್ರಿಯೆ ಆರಂಭಿಸಿದ್ದಾರೆ. ಇದು ಆತಂಕಕ್ಕೆ ಕಾರಣವಾಗಿದೆ. ನಮ್ಮ ರಾಜ್ಯದ ಕಬ್ಬಿಣದ ಅದಿರಿಗೆ ಸಾಕಷ್ಟು ಬೆಲೆ ಇದೆ. ಜಿಂದಾಲ್ ಸಂಸ್ಥೆ ಅಷ್ಟು ದೊಡ್ಡ ಮಟ್ಟದಲ್ಲಿ ಬೆಳೆದಿರಬೇಕಾದರೆ, ಈ ಸಂಸ್ಥೆ ಉಳಿಸಲು ನಾವು ಪ್ರಯತ್ನ ಮಾಡುತ್ತೇವೆ. ಮೊದಲು ಕ್ಲೋಸರ್ ಪ್ರಕ್ರಿಯೆ ನಿಲ್ಲಿಸಲು ಪ್ರಯತ್ನ ಮಾಡಲಾಗುವುದು. ಬೇರೆ ಕಂಪನಿಗಳೊಂದಿಗೆ ಮಾತುಕತೆ ನಡೆಸುತ್ತೇವೆ ಎಂದು ಮುಖ್ಯಮಂತ್ರಿಗಳು ಭರವಸೆ ನೀಡಿದರು.