105 ವರ್ಷಗಳ ಹಿಂದೆ ಸರ್ ಎಂ ವಿಶ್ವೇಶ್ವರಯ್ಯ ಅವರ ಸಲಹೆ ಮೇರೆಗೆ ಮೈಸೂರಿನ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಶಿವಮೊಗ್ಗ ಜಿಲ್ಲೆ ಭದ್ರಾವತಿಯಲ್ಲಿ ಸ್ಥಾಪಿಸಿದ್ದ ವಿಐಎಸ್ಎಲ್ ಕಾರ್ಖಾನೆ ಮುಚ್ಚುವ ಭೀತಿ ಎದುರಾಗಿತ್ತು.
ನಷ್ಟದ ಕಾರಣಕ್ಕೆ ಈ ಕಾರ್ಖಾನೆಯನ್ನು ಮುಚ್ಚಲಾಗುತ್ತಿದೆ ಎಂದು ಸ್ವತಃ ಕೇಂದ್ರ ಸರ್ಕಾರವೇ ಸಂಸತ್ತಿನಲ್ಲಿ ಹೇಳಿಕೆ ನೀಡಿದ ಬಳಿಕ ಕಾರ್ಖಾನೆ ಪುನರಾರಂಭವಾಗಬಹುದೆಂಬ ನಿರೀಕ್ಷೆ ಹುಸಿಯಾಗಿತ್ತು.
ವಿಐಎಸ್ಎಲ್ ಕಾರ್ಖಾನೆ ಮುಚ್ಚುವ ಆತಂಕದಲ್ಲಿದ್ದವರಿಗೆ ಸಮಾಧಾನ ತರುವ ಸುದ್ದಿ ಒಂದು ಇಲ್ಲಿದೆ. ಕಾರ್ಖಾನೆಯನ್ನು ಯಾವುದೇ ಕಾರಣಕ್ಕೂ ಮುಚ್ಚುವುದಿಲ್ಲ. ಅದನ್ನು ಉಳಿಸಿಕೊಳ್ಳಲು ಪೂರಕವಾದ ಎಲ್ಲ ಕ್ರಮ ಕೈಗೊಳ್ಳುವುದಾಗಿ ರಾಜ್ಯ ಸರ್ಕಾರ ತಿಳಿಸಿದ್ದು, ಒಂದಷ್ಟು ನೆಮ್ಮದಿ ಮೂಡಿಸಿದೆ.
ವಿಧಾನಸಭೆಯಲ್ಲಿ ಈ ಕುರಿತಂತೆ ಸ್ಪಷ್ಟನೆ ನೀಡಿರುವ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ. ಮಾಧುಸ್ವಾಮಿ, ಕಾರ್ಖಾನೆ ಮುಚ್ಚುವ ಉದ್ದೇಶ ಸರ್ಕಾರಕ್ಕಿಲ್ಲ. ಚಿಕ್ಕನಾಯಕನಹಳ್ಳಿಯಲ್ಲಿ ಅದಿರು ಗಣಿಗಾರಿಕೆಗಾಗಿ ನಾಲ್ಕು ಎಕರೆ ಜಾಗ ನೀಡಲಾಗಿದೆ. ಕಾರ್ಖಾನೆ ಮುನ್ನಡೆಸಲು ಸೂಕ್ತ ಕ್ರಮ ಕೈಗೊಳ್ಳಲು ಸರ್ಕಾರ ಬದ್ಧವಿದೆ ಎಂದು ಹೇಳಿದ್ದಾರೆ.