ಬೇಕಾಬಿಟ್ಟಿಯಾಗಿ ಹಣ ಖರ್ಚು ಮಾಡಿ, ನಮ್ಮ ದುಡ್ಡು ನಮ್ಮ ಇಷ್ಟ ಎಂದು ಮಾನವೀಯತೆ ಮರೆತು ಬದುಕುವ ಅದೆಷ್ಟೋ ಜನರಿಗೆ ವೈರಲ್ ಆಗಿರುವ ಈ ವಿಡಿಯೋ ಉತ್ತಮ ಸಂದೇಶವನ್ನು ನೀಡುವಂತಿದೆ.
ಹೊಟ್ಟೆಪಾಡಿಗಾಗಿ ರಸ್ತೆ ಬದಿ ಮಗುವನ್ನು ಎತ್ತಿಕೊಂಡು ಲೈಟಿಂಗ್ ಬಲೂನ್ ಮಾರಾಟ ಮಾಡುತ್ತಿದ್ದ ಬಡ ಮಹಿಳೆಯ ಸಂಕಷ್ಟ ಕಂಡ ಸರ್ದಾರ್ ಜಿ ಒಬ್ಬರು, ಆಕೆಯ ಬಳಿ ಇದ್ದ ಒಂದು ಬಲೂನು ಖರೀದಿಸಿ ಬಳಿಕ ತೋರಿದ ಮಾನವೀತೆ ನಿಜಕ್ಕೂ ಎಲ್ಲರನ್ನೂ ಅರೆಕ್ಷಣ ಬೆರಗಾಗುಗೊಳಿಸುವಂತಿದೆ. ಮಹಿಳೆ ಬಳಿ ಬಲೂನು ಖರೀದಿಸಿದ ಸರ್ದಾರ್ ಜಿ ರಸ್ತೆ ಬಳಿ ಓಡಾಡುತ್ತಿದ್ದ ಜನರ ಬಳಿ ಹೋಗಿ ತಮ್ಮ ಕೈಯ್ಯಾರೆ ಹಣ ಕೊಟ್ಟು, ಅಲ್ಲಿ ನಿಂತಿರುವ ಮಹಿಳೆ ಬಳಿ ಬಲೂನು ಖರೀದಿ ಮಾಡಿ ಸಹಾಯ ಮಾಡುವಂತೆ ಮನವಿ ಮಾಡುತ್ತಾರೆ. ಅದರಂತೆ ರಸ್ತೆಯ ಇಕ್ಕೆಲಗಳಲ್ಲಿ ಓಡಾಡುತ್ತಿದ್ದ ಹಲವರು ಮಹಿಳೆ ಬಳಿ ಬಂದು ಬಲೂನು ಖರೀದಿಸಿ ಸಾಗಿದ್ದಾರೆ.
ಕೆಲವೇ ಸಮಯದಲ್ಲಿ ಮಹಿಳೆಯ ರಸ್ತೆಬದಿ ಇಟ್ಟಿದ್ದ ಎಲ್ಲಾ ಬಲೂನುಗಳು ಮಾರಾಟವಾಗಿವೆ. ಎಲ್ಲಾ ಬಲೂನುಗಳು ಮಾರಾಟವಾಗಿದ್ದಕ್ಕೆ ಕೈಯಲ್ಲಿ ಮಗುವನ್ನು ಎತ್ತಿಕೊಂಡು ನಿಂತಿದ್ದ ಮಹಿಳೆಯ ಮೊಗದಲ್ಲಿ ಮಂದಹಾಸ…… ಅಷ್ಟರಲ್ಲಿ ಮತ್ತೆ ಅಲ್ಲಿಗೆ ಆಗಮಿಸಿದ ಸರ್ದಾರ್ ಜಿ ತಾನು ಖರೀದಿಸಿದ್ದ ಒಂದು ಬಲೂನನ್ನು ಮಹಿಳೆಯ ಕೈಗಿತ್ತು ತಾಯಿ ಹಾಗೂ ಮಗುವಿಗೆ ಸಹಾಯ ಮಾಡಿದ ಖುಷಿಯಿಂದ ಸ್ಥಳದಿಂದ ತೆರಳುತ್ತಾರೆ. ದೇವರಂತೆ ಬಂದು ಸಹಾಯ ಮಾಡಿ ಮಿಂಚಿನಂತೆ ತೆರಳಿದ ಮಹಾನುಭಾವನನ್ನು ಕಂಡು ಮಹಿಳೆ ಮೂಕವಿಸ್ಮಿತರಾಗಿದ್ದಾರೆ… ಹಣದ ಅಮಲಲ್ಲಿ ತೇಲುವ ಅನೇಕರು ಶ್ರೀಮಂತಿಕೆಯ ಜೊತೆಗೆ ಹೀಗೆ ಮಾನವೀಯತೆ, ಸಹಾಯ ಮಾಡುವ ಗುಣವನ್ನೂ ರೂಡಿಸಿಕೊಂಡರೆ ಸಮಾಜದಲ್ಲಿ ಬದಲಾವಣೆ ಜೊತೆಗೆ ಅದೆಷ್ಟೋ ಬಡಜನತೆಗೆ ಹೊತ್ತಿನ ಊಟವು ನೀಡಿದಂತಾಗುತ್ತದೆ.