ಉತ್ತರ ಪ್ರದೇಶದಲ್ಲಿ ನಡೆದ ವಿವಾಹವೊಂದರಲ್ಲಿ ಹಾರ ಬದಲಾವಣೆ ವೇಳೆ ವರ ತನ್ನ ವಧುವಿಗೆ ಚುಂಬಿಸಿದ ನಂತರ ಎರಡೂ ಕುಟುಂಬಗಳ ನಡುವೆ ಘರ್ಷಣೆಯಾಗಿದೆ.
ವರಮಾಲಾ ಸಮಾರಂಭದಲ್ಲಿ ಮದುವೆ ಗಂಡು, ಹೆಣ್ಣನ್ನು ಸಾರ್ವಜನಿಕವಾಗಿ ಚುಂಬಿಸಿದ ನಂತರ ವಧುವಿನ ಕುಟುಂಬವು ವರನ ಸಂಬಂಧಿಕರನ್ನು ವೇದಿಕೆಯಲ್ಲಿ ಥಳಿಸಿದ್ದರಿಂದ ಹಾಪುರದ ಅಶೋಕ್ ನಗರದಲ್ಲಿನ ಮದುವೆಯ ಸ್ಥಳವು ರಣರಂಗವಾಗಿ ಮಾರ್ಪಟ್ಟಿತು.
ವಧುವಿಗೆ ಚುಂಬಿಸಿದ ವರನ ಕೃತ್ಯದಿಂದ ಕುಪಿತಗೊಂಡ ಎರಡು ಕಡೆಯವರ ನಡುವೆ ವಾಗ್ವಾದ ನಡೆದಿದೆ. ಇದಾದ ಬಳಿಕ ವಧುವಿನ ಕುಟುಂಬಸ್ಥರು ದೊಣ್ಣೆ ಹಿಡಿದು ವೇದಿಕೆ ಮೇಲೆ ಏರಿ ವರನ ಮನೆಯವರಿಗೆ ಥಳಿಸಿದ್ದಾರೆ. ಘರ್ಷಣೆಯಲ್ಲಿ ವಧುವಿನ ತಂದೆ ಸೇರಿದಂತೆ ಆರು ಮಂದಿ ಗಾಯಗೊಂಡಿದ್ದಾರೆ.
ಪೊಲೀಸರನ್ನು ಕರೆಸಿದ ಬಳಿಕ ಎರಡೂ ಕುಟುಂಬಗಳ ಏಳು ಜನರನ್ನು ಬಂಧಿಸಲಾಯಿತು. ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ರವಾನಿಸಲಾಗಿದೆ.
ಪೊಲೀಸರ ಪ್ರಕಾರ, ಸೋಮವಾರ ರಾತ್ರಿ ವಧುವಿನ ತಂದೆ ತನ್ನ ಇಬ್ಬರು ಹೆಣ್ಣುಮಕ್ಕಳ ಮದುವೆಯನ್ನು ಏರ್ಪಡಿಸಿದ್ದರು. ಮೊದಲ ಮದುವೆ ಯಾವುದೇ ತೊಂದರೆಯಿಲ್ಲದೆ ಮುಕ್ತಾಯಗೊಂಡರೆ, ಎರಡನೇ ಸಮಾರಂಭದಲ್ಲಿ ಈ ಘರ್ಷಣೆ ನಡೆದಿದೆ.
ವಧುವಿನ ಕುಟುಂಬವು ವರನು ವೇದಿಕೆಯ ಮೇಲೆ ಬಲವಂತವಾಗಿ ಚುಂಬಿಸಿದ್ದಾನೆ ಎಂದು ಆರೋಪಿಸಿದೆ. ಆದರೆ ವರಮಾಲಾ ಸಮಾರಂಭದ ನಂತರ ವಧು ಚುಂಬಿಸುವಂತೆ ನನ್ನನ್ನು ಒತ್ತಾಯಿಸಿದಳು ಎಂದು ವರ ಹೇಳಿದ್ದಾನೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಇದುವರೆಗೆ ಯಾವುದೇ ಲಿಖಿತ ದೂರು ಬಂದಿಲ್ಲ ಮತ್ತು ದೂರು ಸ್ವೀಕರಿಸಿದ ನಂತರ ಕ್ರಮ ಕೈಗೊಳ್ಳಲಾಗುವುದು ಎಂದು ಹಿರಿಯ ಹಾಪುರ ಪೊಲೀಸ್ ಅಧಿಕಾರಿ ಹೇಳಿದ್ದಾರೆ. ಭಾರತೀಯ ದಂಡ ಸಂಹಿತೆಯ ಸೆಕ್ಷನ್ 151 ರ ಅಡಿಯಲ್ಲಿ ಸಾರ್ವಜನಿಕ ಶಾಂತಿ ಕದಡುವ ಆರೋಪದಡಿ ಆರೋಪ ಹೊರಿಸಲಾಗಿದೆ.