ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ಸ್ಟಾರ್ ಆಟಗಾರ ವೆಂಕಟೇಶ ಅಯ್ಯರ್ ಹೊಸ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ತಮಿಳುನಾಡಿನ ಕಾಂಚೀಪುರಂನಲ್ಲಿರುವ ವೇದ ಪಾಠಶಾಲೆಗೆ ಭೇಟಿ ನೀಡಿದ ವೆಂಕಟೇಶ ಅಯ್ಯರ್ ಅಚ್ಚ ಬಿಳಿ ಬಣ್ಣದ ಧೋತಿ ಉಟ್ಟು ಮಿಂಚಿದ್ರು.
ಈ ಸಂದರ್ಭದಲ್ಲಿ ಧೋತಿ ಉಟ್ಟುಕೊಂಡೇ ಅಲ್ಲಿನ ವೇದ ಪಾಠಶಾಲೆಯ ಮಕ್ಕಳೊಂದಿಗೆ ವೆಂಕಟೇಶ ಅಯ್ಯರ್ ಕ್ರಿಕೆಟ್ ಆಡಿದ್ದಾರೆ. ಕ್ರಿಕೆಟ್ ಬಗ್ಗೆ ಅವರಿಗಿರೋ ಅಚಲವಾದ ಪ್ರೀತಿ ಮತ್ತು ಉತ್ಸಾಹ ನೋಡಿ ಎಲ್ಲರೂ ಮತ್ತೊಮ್ಮೆ ದಂಗಾಗಿದ್ದಾರೆ.
ಇಂಡಿಯನ್ ಪ್ರೀಮಿಯರ್ ಲೀಗ್ ಮುಕ್ತಾಯವಾಗಿರೋದ್ರಿಂದ ವೆಂಕಟೇಶ ಅಯ್ಯರ್ ವಿಶ್ರಾಂತಿಯ ಮೂಡ್‌ನಲ್ಲಿದ್ದರು. ವೇದ ಪಾಠಶಾಲೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಅಲ್ಲಿನ ಮಕ್ಕಳೊಂದಿಗೆ ಬೆರೆತು ಕ್ರಿಕೆಟ್ ಆಡಿದ್ದಾರೆ. ಸಂವಾದ ಕೂಡ ನಡೆಸಿದ್ದಾರೆ.
ಈ ಸಂತೋಷದ ಕ್ಷಣಗಳನ್ನು Instagram ನಲ್ಲಿ ಹಂಚಿಕೊಳ್ಳಲಾಗಿದೆ. ವೇದ ಪಾಠಶಾಲೆಯ ವಿದ್ಯಾರ್ಥಿಗಳು ಒಬ್ಬೊಬ್ಬರಾಗಿಯೇ ಬೌಲಿಂಗ್ ಮಾಡಿದ್ರು. ವೆಂಕಟೇಶ ಅಯ್ಯರ್ ತಮ್ಮ ಬ್ಯಾಟಿಂಗ್ ಕೌಶಲ್ಯವನ್ನ ಅಲ್ಲಿ ಪ್ರದರ್ಶಿಸಿದ್ದಾರೆ. ಪಾಠಶಾಲೆಯ ಶಿಕ್ಷಕರು ಕೂಡ ಇದಕ್ಕೆ ಸಾಕ್ಷಿಯಾಗಿದ್ದಾರೆ.
ವಿದ್ಯಾರ್ಥಿಗಳೊಂದಿಗೆ ಸಂವಹನ ನಡೆಸಲು ಅವಕಾಶ ಕೊಟ್ಟಿದ್ದಕ್ಕಾಗಿ ಅಯ್ಯರ್ ಕೃತಜ್ಞತೆಯನ್ನು ವ್ಯಕ್ತಪಡಿಸಿದ್ದಾರೆ.
ಈ ಬಾರಿಯ ಐಪಿಎಲ್‌ನಲ್ಲಿ ಪ್ಲೇ ಆಫ್‌ಗೆ ಅರ್ಹತೆ ಪಡೆಯುವಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ವಿಫಲವಾಗಿತ್ತು. ಆದರೆ ಐಪಿಎಲ್‌ನಲ್ಲಿ ವೆಂಕಟೇಶ ಅಯ್ಯರ್ ಅದ್ಭುತ ಪ್ರದರ್ಶನ ನೀಡಿದ್ರು. ಅಯ್ಯರ್ 14 ಪಂದ್ಯಗಳಲ್ಲಿ ಒಟ್ಟು 404 ರನ್ ಗಳಿಸುವ ಮೂಲಕ ಅಸಾಧಾರಣ ಫಾರ್ಮ್ ಅನ್ನು ಪ್ರದರ್ಶಿಸಿದ್ದಾರೆ. 145.85ರ ಪ್ರಭಾವಶಾಲಿ ಸ್ಟ್ರೈಕ್ ರೇಟ್ ಅನ್ನು ಕಾಯ್ದುಕೊಂಡಿದ್ದಾರೆ. ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ಐಪಿಎಲ್‌ನಲ್ಲಿ ಚೊಚ್ಚಲ ಶತಕವನ್ನೂ ಗಳಿಸಿದ್ದು ವಿಶೇಷ.