ಮಧ್ಯಪ್ರದೇಶದ ಸಿಧಿ ಜಿಲ್ಲೆಯಲ್ಲಿ ವ್ಯಕ್ತಿಯೊಬ್ಬ ಕಾರ್ಮಿಕನ ಮೇಲೆ ಮೂತ್ರ ವಿಸರ್ಜಿಸಿರುವ ವಿಡಿಯೋವೊಂದು ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.
ಬುಡಕಟ್ಟು ಜನಾಂಗದ ಕಾರ್ಮಿಕನ ಮೇಲೆ ವ್ಯಕ್ತಿ ಮೂತ್ರ ವಿಸರ್ಜಿಸುತ್ತಿರುವ ವಿಡಿಯೋ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಗಮನಕ್ಕೆ ಬಂದ ಕೂಡಲೇ ಆರೋಪಿಗಳ ವಿರುದ್ಧ ರಾಷ್ಟ್ರೀಯ ಭದ್ರತಾ ಕಾಯ್ದೆ(ಎನ್‌ಎಸ್‌ಎ) ಹಾಕಲಾಗುವುದು ಎಂದು ತಿಳಿಸಿದ್ದಾರೆ.
ಸಿಧಿ ಜಿಲ್ಲೆಯ ವೈರಲ್ ವೀಡಿಯೊ ನನ್ನ ಗಮನಕ್ಕೆ ಬಂದಿದೆ. ಅಪರಾಧಿಯನ್ನು ಬಂಧಿಸಲು ಮತ್ತು ಕಠಿಣ ಕ್ರಮ ಕೈಗೊಳ್ಳಲು ಮತ್ತು ಎನ್‌ಎಸ್‌ಎ ವಿಧಿಸಲು ನಾನು ಆಡಳಿತಕ್ಕೆ ಸೂಚನೆ ನೀಡಿದ್ದೇನೆ ಎಂದು ಚೌಹಾಣ್ ಟ್ವೀಟ್ ಮಾಡಿದ್ದಾರೆ.
ಈ ವಿಡಿಯೋ ಮಧ್ಯಪ್ರದೇಶದ ವಿರೋಧ ಪಕ್ಷದ ನಾಯಕರಿಂದಲೂ ತೀವ್ರ ಟೀಕೆಗೆ ಗುರಿಯಾಗಿದೆ. ಇಂತಹ ಹೇಯ ಕೃತ್ಯಕ್ಕೆ ಸುಸಂಸ್ಕೃತ ಸಮಾಜಕ್ಕೆ ಅವಕಾಶವಿಲ್ಲ ಎಂದು ಮಾಜಿ ಸಿಎಂ ಕಮಲ್ ನಾಥ್ ಹೇಳಿದ್ದಾರೆ. ಮಧ್ಯಪ್ರದೇಶದಲ್ಲಿ ಆದಿವಾಸಿಗಳ ಮೇಲಿನ ದೌರ್ಜನ್ಯಗಳು ಕೊನೆಗೊಳ್ಳಬೇಕು ಎಂದು ಅವರು ಹೇಳಿದ್ದಾರೆ.