ಗುವಾಹಟಿ: ನಾಗಾಲ್ಯಾಂಡ್‌ನಲ್ಲಿ ಮಂಗಳವಾರ ಸಂಜೆ ಸಂಭವಿಸಿದ ಭೂಕುಸಿತದಿಂದ ಗುಡ್ಡ ಕುಸಿದು ದೈತ್ಯ ಬಂಡೆಗಳು ಅಪ್ಪಳಿಸಿದ್ದರಿಂದ ಎರಡು ಕಾರ್ ಗಳು ಸಂಪೂರ್ಣ ನುಜ್ಜುಗುಜ್ಜಾದ ಪರಿಣಾಮ ಇಬ್ಬರು ಸಾವನ್ನಪ್ಪಿದ್ದಾರೆ.
ದಿಮಾಪುರ್ ಮತ್ತು ಕೊಹಿಮಾ ನಡುವಿನ ಚುಮೌಕೆಡಿಮಾ ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿ 29 ರಲ್ಲಿ ಭಾರೀ ಮಳೆಯ ನಡುವೆ ಸಂಜೆ 5 ಗಂಟೆ ಸುಮಾರಿಗೆ ಸಂಭವಿಸಿದ ಅಪಘಾತದಲ್ಲಿ ಇತರ ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಕೊಹಿಮಾ ಕಡೆಯಿಂದ ಬರುತ್ತಿದ್ದ ಎರಡು ಕಾರ್ ಗಳನ್ನು ಸಂಪೂರ್ಣವಾಗಿ ನುಜ್ಜುಗುಜ್ಜುಗೊಳಿಸಿದ ನಂತರ, ಒಂದು ಬಂಡೆಯು ಮತ್ತೊಂದು ಕಾರ್ ನತ್ತ ಉರುಳಿದೆ. ಹಿಂದೆ ಕಾಯುತ್ತಿದ್ದ ಕಾರ್ ನ ಡ್ಯಾಶ್‌ಬೋರ್ಡ್ ಕ್ಯಾಮೆರಾದಲ್ಲಿ ಭಯಾನಕ ದೃಶ್ಯ ಸೆರೆಯಾಗಿದೆ.
ಒಬ್ಬರು ಸ್ಥಳದಲ್ಲೇ ಮೃತಪಟ್ಟರೆ, ಮತ್ತೊಬ್ಬರು ಆಸ್ಪತ್ರೆಯಲ್ಲಿ ಚಿಕಿತ್ಸೆ ವೇಳೆ ಮೃತಪಟ್ಟಿದ್ದಾರೆ. ಇನ್ನೊಬ್ಬ ವ್ಯಕ್ತಿ ಇನ್ನೂ ಕಾರಿನೊಳಗೆ ಸಿಲುಕಿಕೊಂಡಿದ್ದು, ರಕ್ಷಣಾ ಕಾರ್ಯಾಚರಣೆ ನಡೆಸಿ ಹೊರ ತೆಗೆಯಲಾಗಿದೆ. ಅಪಘಾತ ಸಂಭವಿಸಿದ ಸ್ಥಳವನ್ನು ಪಕಲಾ ಪಹಾರ್ ಎಂದು ಕರೆಯಲಾಗುತ್ತದೆ ಮತ್ತು ಭೂಕುಸಿತಗಳು ಮತ್ತು ಬಂಡೆಗಳ ಕುಸಿತಕ್ಕೆ ಈ ಸ್ಥಳ ಕುಖ್ಯಾತವಾಗಿದೆ. ಅಪಘಾತದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.