ಬೆಂಗಳೂರು: ವಾಲ್ಮೀಕಿ ನಿಗಮದಲ್ಲಿ 187 ಕೋಟಿ ಭ್ರಷ್ಟಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ವೇಳೆ ದಿನಕ್ಕೊಂದು ಸ್ಫೋಟಕ ಮಾಹಿತಿ ಬಹಿರಂಗವಾಗುತ್ತಿದೆ.
ನಿಗದ ಕೋಟಿ ಕೋಟಿ ಹಣ ಲೂಟಿ ಮಾಡಲೆಂದೇ ನಕಲಿ ಹುದ್ದೆಯನ್ನು ಸೃಷ್ಟಿ ಮಾಡಲಾಗಿತ್ತು ಎಂಬುದು ಇದೀಗ ಬಯಲಾಗಿದೆ. ನಿಗಮದ ಹಣ ಅಕ್ರಮ ವರ್ಗಾವಣೆ ಹಿನ್ನೆಲೆಯಲ್ಲಿ ಜಾರಿ ನಿರ್ದೇಶನಾಲಯ ತನಿಖೆಯಲ್ಲಿ ಪ್ರವೇಶ ಮಾಡುತ್ತಿದ್ದಂತೆ ಮತ್ತಷ್ಟು ಅವ್ಯವಹಾರ ಪ್ರಕರಣ ಬೆಳಕಿಗೆ ಬರುತ್ತಿದೆ.
ವಾಲ್ಮೀಕಿ ನಿಗಮದ ಎಂಡಿ ಪದ್ಮನಾಭ್, ಹಣ ಲೂಟಿಗಾಗಿ ನಕಲಿ ಹುದ್ದೆ, ನಕಲಿ ವ್ಯಕ್ತಿಯನ್ನು ಸೃಷ್ಟಿ ಮಾಡಿದ್ದರು. ಈ ನಕಲಿ ವ್ಯಕ್ತಿ 45 ಕೋಟಿ ಅವ್ಯವಹಾರ ನಡೆಸಿರುವುದಾಗಿ ತಿಳಿದುಬಂದಿದೆ.
ಎಂಡಿ ಪದ್ಮನಾಭ್, ಜ್ಯೂನಿಯರ್ ಅಕೌಂಟೆಂಟ್ ಎಂಬ ನಕಲಿ ಹುದ್ದೆಯನ್ನು ಸೃಷ್ಟಿಸಿ, ಈ ಹುದ್ದೆಗೆ ಶಿವಕುಮಾರ್ ಎಂಬ ನಕಲಿ ವ್ಯಕ್ತಿಗೆ ಹುದ್ದೆ ನೀಡಲಾಗಿದೆ ಎಂದು ತೋರಿಸಿದ್ದರು. ಜ್ಯೂನಿಯರ್ ಅಕೌಂಟೆಂಟ್ ಎಂದು ಐಡಿ ಕಾರ್ಡ್ ನೀಡಿ ಹಣಕಾಸು ವ್ಯವಹಾರ ನೋಡಿಕೊಳ್ಳುವ ಅಧಿಕಾರ ನೀಡಲಾಗಿತ್ತು. ಆದರೆ ಅಸಲಿಗೆ ಶಿವಕುಮಾರ್ ಎಂಬ ಹೆಸರಿನ ವ್ಯಕ್ತಿಯೇ ಇರಲಿಲ್ಲ. ಬೆಂಗಳೂರಿನ ಎಂ.ಜಿ.ರಸ್ತೆಯ ಯೂನಿಯನ್ ಬ್ಯಾಂಕ್ ನಲ್ಲಿ ಶಿವಕುಮಾರ್ ಹೆಸರಲ್ಲಿ ಬ್ಯಾಂಕ್ ಖಾತೆಯೂ ಓಪನ್ ಆಗಿದ್ದು, ಖಾತೆ ತೆರೆದ ಬಳಿಕ ನಿಗಮದಿಂದ ಶಿವಕುಮಾರ್ ಖಾತೆಗೆ 187 ಕೋಟಿ ಹಣ ವರ್ಗಾವಣೆ ಮಾಡುವಂತೆ ಮನವಿ ಹೋಗುತ್ತದೆ. ಮನವಿ ಮೇರೆಗೆ ಹಣ ವರ್ಗಾವಣೆಯಾಗಿದೆ.
ಬಳಿಕ ಶಿವಕುಮಾರ್ ಖಾತೆಯಿಂದ ಹೈದರಾಬಾದ್ ನ ಆರ್ ಬಿಎಲ್ ಬ್ಯಾಂಕ್ ಗೆ ಹಣ ವರ್ಗಾವಣೆ ಆಗಿದೆ. ಪದ್ಮನಾಭನ ಕೃತ್ಯಕ್ಕೆ ಯೂನಿಯನ್ ಬ್ಯಾಂಕ್ ಸಿಬ್ಬಂದಿ ಸಾಥ್ ನೀಡಿದ್ದಾರೆ ಎಂದು ತಿಳಿದುಬಂದಿದೆ.