ಆಗ್ರಾ: ಬಾಲಗೃಹದಲ್ಲಿ ಹಾಸಿಗೆಯ ಮೇಲೆ ಮಲಗಿದ್ದ ಅಪ್ರಾಪ್ತೆಯನ್ನು ಅಧಿಕಾರಿಯೊಬ್ಬರು ಚಪ್ಪಲಿಯಿಂದ ಥಳಿಸಿರುವ ಆಘಾತಕಾರಿ ಘಟನೆ ಉತ್ತರ ಪ್ರದೇಶದ ಆಗ್ರಾದಲ್ಲಿ ನಡೆದಿದೆ.
ಅಪ್ರಾಪ್ತ ಬಾಲಕಿಯನ್ನು ಮಹಿಳಾ ಅಧಿಕಾರಿ ಮನಬಂದಂತೆ ಥಳಿಸಿರುವ ವಿಡಿಯೋ ವೈರಲ್ ಆಗಿದ್ದು, ಇದೀಗ ಈ ಬಗ್ಗೆ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಜಿಲ್ಲಾ ಪ್ರೊಬೆಷನರಿ ಅಧಿಕಾರಿ (ಡಿಪಿಒ) ಅವರಿಗೆ ಜಿಲ್ಲಾಧಿಕಾರಿ ಆದೇಶ ನೀಡಿದ್ದಾರೆ.
ಮಹಿಳಾ ಅಧಿಕಾರಿ ಅಮಾನತು
ಇನ್ನು ಘಟನೆ ದೃಶ್ಯ ವೈರಲ್ ಬೆನ್ನಲ್ಲೇ ಸೂಪರಿಂಟೆಂಡೆಂಟ್ ಪೂನಂ ಪಾಲ್ ಅವರನ್ನು ಅಮಾನತುಗೊಳಿಸಲಾಗಿದೆ. ಮಹಿಳಾ ಕಲ್ಯಾಣ ಇಲಾಖೆಯ ಶಿಫಾರಸಿನ ಮೇರೆಗೆ ಡಿಪಿಒ ಅವರು ಮಕ್ಕಳ ಆಶ್ರಯಕ್ಕೆ ಭೇಟಿ ನೀಡಿ ವರದಿ ಸಲ್ಲಿಸಿದ್ದಾರೆ. ಆ ನಂತರ ಬಾಲಕಿಗೆ ಚಪ್ಪಲಿಯಿಂದ ಥಳಿಸಿದ ಅಧಿಕಾರಿಯನ್ನು ಅಮಾನತುಗೊಳಿಸಲಾಗಿದೆ.
ಮ್ಯಾಜಿಸ್ಟ್ರೇಟ್ ಅವರೊಂದಿಗೆ ಬಾಲಗೃಹಕ್ಕೆ ಭೇಟಿ ನೀಡಿದ ಡಿಪಿಒ ಅಜಯ್ ಪಾಲ್ ಸಿಂಗ್, ಮಗುವಿನ ಮೇಲೆ ಈ ರೀತಿ ಥಳಿಸುವುದು ಒಪ್ಪತಕ್ಕದಲ್ಲ ಎಂದು ಹೇಳಿದ್ರು.
ಸೆಪ್ಟೆಂಬರ್ 4 ರಂದು ಈ ಘಟನೆ ನಡೆದಿದೆ ಎಂದು ಹೇಳಲಾಗುತ್ತಿದೆ. ಬಾಲಗೃಹದಲ್ಲಿ ಬಾಲಕಿ ಹಾಸಿಗೆಯ ಮೇಲೆ ಮಲಗಿದ್ದಳು. ಆದರೆ, ಕೋಪಗೊಂಡ ಪೂನಂ ಪಾಲ್ ಆಕೆಯನ್ನು ತನ್ನ ಚಪ್ಪಲಿಯಿಂದ ಆಕೆ ಮೇಲೆ ಮನಬಂದಂತೆ ಥಳಿಸಿದ್ದಾಳೆ. ಯಾವ ಕಾರಣಕ್ಕೆ ಅಧಿಕಾರಿ ಬಾಲಕಿಗೆ ಈ ರೀತಿ ಥಳಿಸಿದ್ರು ಎಂಬ ಬಗ್ಗೆ ತಿಳಿದಿಲ್ಲ.