ಅಮೆರಿಕದ ಮಿಷಿಗನ್‌ನ ಕ್ಲಾರ್ಕ್ ಕುಟುಂಬದಲ್ಲಿ ಬರೋಬ್ಬರಿ 137 ವರ್ಷಗಳ ಬಳಿಕ ಹೆಣ್ಣು ಮಗುವೊಂದು ಜನಿಸಿದೆ ! 1885ರಿಂದಲೂ ಈ ಕುಟುಂಬದಲ್ಲಿ ಬರೀ ಗಂಡು ಮಕ್ಕಳೇ ಜನಿಸುತ್ತಾ ಬಂದಿದ್ದಾರೆ.
ಈ ಹೆಣ್ಣು ಮಗುವಿನ ಜನನದಿಂದ ಇಡೀ ಮನೆಯಲ್ಲಿ ಹಬ್ಬದ ವಾತಾವರಣ ನೆಲೆಸಿದೆ. ತಮ್ಮ ಕುಟುಂಬದ ಸೊಸೆಯೊಬ್ಬರು ಗರ್ಭಿಣಿಯಾದ ಸುದ್ದಿ ಕೇಳುತ್ತಲೇ, ಬಹುಶಃ ಇದೂ ಗಂಡು ಮಗುವೇ ಆಗಿರಲಿದೆ ಎಂದು ಭಾವಿಸಿದ್ದರು ಕ್ಲಾಸ್ ಕುಟುಂಬಸ್ಥರು.
ಈ ಹೆಣ್ಣು ಮಗುವಿಗೆ ಆಡ್ರೇ ಎಂದು ಹೆಸರಿಡಲಾಗಿದೆ. ತನಗೆ ಮಗಳು ಹುಟ್ಟಿದ್ದಾಳೆ ಎಂದು ಖುದ್ದು ಆಕೆಯ ತಾಯಿ ಕೆರೋಲಿನ್ ಕ್ಲಾರ್ಕ್ ಮೊದಲಿಗೆ ನಂಬಿರಲಿಲ್ಲ.
“ನಾನು ಹತ್ತು ವರ್ಷಗಳ ಹಿಂದೆ ಕುಟುಂಬದ ಈ ಇತಿಹಾಸದ ಬಗ್ಗೆ ಮೊದಲ ಬಾರಿಗೆ ಕೇಳಿದ್ದಾಗ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿರಲಿಲ್ಲ. ಆದರೆ ಮೇಲಿಂದ ಮೇಲೆ ಗಂಡು ಮಕ್ಕಳೇ ಜನಿಸುತ್ತಾ ಸಾಗಿದ ಮೇಲೆ ನಂಬಲೇ ಬೇಕಾಯಿತು” ಎನ್ನುತ್ತಾರೆ ಕೆರೋಲಿನ್.
“ನಮಗೆ ಜನವರಿ 2021ರಲ್ಲಿ ಗರ್ಭಪಾತವಾಗಿತ್ತು. ಇದಾದ 15 ತಿಂಗಳ ಬಳಿಕ ನಾನು ಆಡ್ರೇಗೆ ತಾಯಿಯಾದೆ. ಅವಳು ನಮ್ಮೆಲ್ಲಾ ಕಾಯುವಿಕೆಗೊಂದು ಸಾರ್ಥಕತೆ ತಂದಿದ್ದಾಳೆ. ಅವಳು ನಮ್ಮ ಅದೃಷ್ಟ ದೇವತೆ. ಅವಳ ಅಣ್ಣ ಕ್ಯಾಮರೂನ್ ಆಕೆಯನ್ನು ಬಹುವಾಗಿ ಪ್ರೀತಿಸುತ್ತಿದ್ದಾನೆ,” ಎಂದಿದ್ದಾರೆ ಕೆರೋಲಿನ್.