ಅಯೋಧ್ಯೆ: ಜನವರಿ 22 ರಂದು ಪವಿತ್ರ ಅಯೋಧ್ಯೆ ನಗರದಲ್ಲಿ ರಾಮಮಂದಿರ ಲೋಕಾರ್ಪಣೆ ಸಮಾರಂಭಕ್ಕೆ ಮೊದಲು ಗುರುವಾರ ಮೂವರು ಅನುಮಾನಾಸ್ಪದ ವ್ಯಕ್ತಿಗಳನ್ನು ಉತ್ತರ ಪ್ರದೇಶ ಭಯೋತ್ಪಾದನಾ ನಿಗ್ರಹ ದಳ(ಎಟಿಎಸ್) ಬಂಧಿಸಿದೆ.
ಯುಪಿ ವಿಶೇಷ ಪೊಲೀಸ್ ಮಹಾನಿರ್ದೇಶಕ(ಕಾನೂನು ಮತ್ತು ಸುವ್ಯವಸ್ಥೆ), ಪ್ರಶಾಂತ್ ಕುಮಾರ್ ಅವರು, ಜಿಲ್ಲೆಯಲ್ಲಿ ತಪಾಸಣೆ ನಡೆಸುತ್ತಿರುವಾಗ ರಾಜ್ಯ ಎಟಿಎಸ್ ಮೂವರು ಅನುಮಾನಾಸ್ಪದ ವ್ಯಕ್ತಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಆದರೆ, ಇದುವರೆಗೆ ಯಾವುದೇ ಭಯೋತ್ಪಾದಕ ಸಂಘಟನೆಯೊಂದಿಗೆ ಅವರ ಒಡನಾಟ ಬಯಲಿಗೆ ಬಂದಿಲ್ಲ ಎಂದು ಮಾಹಿತಿ ನೀಡಿದ್ದಾರೆ.
ರಾಜ್ಯ ಸರ್ಕಾರ ಮತ್ತು ಪೊಲೀಸ್ ಪ್ರಧಾನ ಕಚೇರಿಯ ಸೂಚನೆಗಳ ಮೇರೆಗೆ ನಡೆಸುತ್ತಿರುವ ತಪಾಸಣೆ ಅಭಿಯಾನದ ಭಾಗವಾಗಿ, ಅಯೋಧ್ಯೆ ಜಿಲ್ಲೆಯಿಂದ ಯುಪಿ-ಎಟಿಎಸ್ ಮೂವರು ಅನುಮಾನಾಸ್ಪದ ವ್ಯಕ್ತಿಗಳನ್ನು ವಶಕ್ಕೆ ಪಡೆದಿದೆ. ಈ ಶಂಕಿತರನ್ನು ವಿಚಾರಣೆ ನಡೆಸಲಾಗುತ್ತಿದೆ. ಇದುವರೆಗೆ ಯಾವುದೇ ಭಯೋತ್ಪಾದಕ ಸಂಘಟನೆಯೊಂದಿಗೆ ಅವರ ಸಂಪರ್ಕವಿದೆ ಎಂಬುದು ಬೆಳಕಿಗೆ ಬಂದಿಲ್ಲ ಎಂದು ಡಿಜಿಪಿ ಕುಮಾರ್ ಹೇಳಿದ್ದಾರೆ.
ಭದ್ರತಾ ಕ್ರಮಗಳು
ಜನವರಿ 22 ರಂದು ಐತಿಹಾಸಿಕ ರಾಮಮಂದಿರದ ‘ಪ್ರಾಣ ಪ್ರತಿಷ್ಠಾ’ ಸಮಾರಂಭದ ಹಿನ್ನೆಲೆಯಲ್ಲಿ ಅಯೋಧ್ಯೆಯಲ್ಲಿ ಭದ್ರತೆಯನ್ನು ಹೆಚ್ಚಿಸಲಾಗುತ್ತಿದೆ. ಯುಪಿ ಪೊಲೀಸರು ಡ್ರೋನ್‌ಗಳ ಮೂಲಕ ಕಣ್ಗಾವಲು ನಡೆಸುತ್ತಿದ್ದಾರೆ.
ಯುಪಿ ಸರ್ಕಾರವು ನಗರದಲ್ಲಿನ ಚಟುವಟಿಕೆಗಳನ್ನು ಮೇಲ್ವಿಚಾರಣೆ ಮಾಡಲು ಆಧುನಿಕ ತಂತ್ರಜ್ಞಾನಗಳನ್ನು ತಂದಿದೆ. ಈ ಉದ್ದೇಶಕ್ಕಾಗಿ ರಾತ್ರಿ ದೃಷ್ಟಿ ಸಾಧನಗಳು ಮತ್ತು ಸಿಸಿಟಿವಿ ಕ್ಯಾಮೆರಾಗಳನ್ನು ಬಳಸಲಾಗುತ್ತಿದೆ.
ಭದ್ರತೆಗಾಗಿ ಎನ್‌ವಿಡಿ, ಇನ್‌ಫ್ರಾರೆಡ್ ಕ್ಯಾಮೆರಾಗಳು ಮತ್ತು ಸಿಸಿಟಿವಿ ಸೇರಿದಂತೆ ಎಲ್ಲಾ ರೀತಿಯ ತಂತ್ರಜ್ಞಾನಗಳನ್ನು ಡ್ರೋನ್‌ಗಳಲ್ಲಿ ಅಳವಡಿಸಲಾಗಿದೆ ಎಂದು ಅಯೋಧ್ಯೆ ಐಜಿ ಪ್ರವೀಣ್ ಕುಮಾರ್ ಹೇಳಿದ್ದಾರೆ.
ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಪ್ರವೀಣ್ ರಂಜನ್ ಸಿಂಗ್, ನಗರದಲ್ಲಿ ಯಾವುದೇ ಅಸಾಮಾನ್ಯ ಚಟುವಟಿಕೆ ಅಥವಾ ವಸ್ತುಗಳನ್ನು ಹಿಡಿಯಲು ನಾವು ಡ್ರೋನ್‌ಗಳ ಮೂಲಕ ಕಣ್ಗಾವಲು ಮಾಡುತ್ತಿದ್ದೇವೆ. ಯಾವುದೇ ವಿಭಿನ್ನ ವಸ್ತುಗಳನ್ನು ಕಂಡುಹಿಡಿಯಲು ನಾವು ಕಟ್ಟಡಗಳು ಮತ್ತು ಮನೆಗಳ ಮೇಲ್ಛಾವಣಿಗಳನ್ನು ಸಹ ಗಮನಿಸುತ್ತಿದ್ದೇವೆ ಎಂದು ಹೇಳಿದ್ದಾರೆ.