ಉತ್ತರ ಪ್ರದೇಶದಲ್ಲಿ ವಕೀಲ ಉಮೇಶ್ ಪಾಲ್ ಅವರ ಹತ್ಯೆ ಪ್ರಕರಣವು ಇತ್ತೀಚೆಗೆ ಗ್ಯಾಂಗ್‌ಸ್ಟರ್-ರಾಜಕಾರಣಿ ಅತೀಕ್ ಅಹ್ಮದ್ ಮತ್ತು ಅವರ ಸಹೋದರ ಅಶ್ರಫ್ ಅಹ್ಮದ್ ಅವರ ಹತ್ಯೆಯೊಂದಿಗೆ ನಾಟಕೀಯ ತಿರುವು ಪಡೆದುಕೊಂಡಿದೆ.
ಬಹುಜನ ಸಮಾಜ ಪಕ್ಷದ(ಬಿಎಸ್ಪಿ) ಶಾಸಕ ರಾಜು ಪಾಲ್ ಹತ್ಯೆ ಪ್ರಕರಣದಲ್ಲಿ ಉಮೇಶ್ ಪಾಲ್ ಪ್ರಮುಖ ಸಾಕ್ಷಿಯಾಗಿದ್ದರು. ಫೆಬ್ರವರಿ 24 ರಂದು ಉಮೇಶ್ ಪಾಲ್ ಕೊಲೆಯಾದ ನಂತರ, ಪ್ರಕರಣಕ್ಕೆ ಸಂಬಂಧಿಸಿದಂತೆ ಒಟ್ಟು ಆರು ಆರೋಪಿಗಳನ್ನು ಕೊಲ್ಲಲಾಗಿದೆ.
ಪ್ರಯಾಗರಾಜ್‌ನಲ್ಲಿ ಶನಿವಾರ ರಾತ್ರಿ ಅತೀಕ್ ಅಹ್ಮದ್ ಮತ್ತು ಅವರ ಸಹೋದರ ಅಶ್ರಫ್ ಅಹ್ಮದ್ ಅವರನ್ನು ಮೂವರು ವ್ಯಕ್ತಿಗಳು ಪಾಯಿಂಟ್ ಬ್ಲಾಂಗ್ ರೇಂಜ್‌ನಲ್ಲಿ ಗುಂಡಿಕ್ಕಿ ಕೊಂದಿದ್ದಾರೆ. ಉಮೇಶ್ ಪಾಲ್ ಅವರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದ ವಿಚಾರಣೆಗಾಗಿ ಗುಜರಾತ್‌ನ ಸಾಬರಮತಿ ಜೈಲಿನಿಂದ ಸಮಾಜವಾದಿ ಪಕ್ಷದ ಮಾಜಿ ಸಂಸದ ಅತೀಕ್ ಅಹ್ಮದ್ ಮತ್ತು ಅವರ ಸಹೋದರನ್ನು ಪ್ರಯಾಗ್ ರಾಜ್ ಗೆ ಕರೆತರಲಾಗಿದ್ದು, ಪೊಲೀಸರ ಕಸ್ಟಡಿಯಲ್ಲಿದ್ದಾಗಲೇ ಗುಂಡು ಹಾರಿಸಿ ಹತ್ಯೆ ಮಾಡಲಾಗಿದೆ.
ಉಮೇಶ್ ಪಾಲ್ ಅವರ ಪತ್ನಿ ಜಯ ಪಾಲ್ ಫೆಬ್ರವರಿ 25 ರಂದು ಅತೀಕ್ ಅಹ್ಮದ್, ಅಶ್ರಫ್ ಅಹ್ಮದ್ ಮತ್ತು ಇತರರ ವಿರುದ್ಧ ದೂರು ನೀಡಿದ್ದರು. ಫೆಬ್ರವರಿ 24 ರಂದು ಪ್ರಯಾಗ್‌ರಾಜ್‌ನಲ್ಲಿರುವ ಸ್ಥಳೀಯ ನ್ಯಾಯಾಲಯದಿಂದ ಮನೆಗೆ ಹಿಂದಿರುಗುತ್ತಿದ್ದಾಗ ಉಮೇಶ್ ಪಾಲ್ ಮತ್ತು ಅವರ ಇಬ್ಬರು ಪೊಲೀಸ್ ಭದ್ರತಾ ಸಿಬ್ಬಂದಿ ಮೇಲೆ ದಾಳಿ ನಡೆಸಲಾಗಿತ್ತು. ಉಮೇಶ್ ಪಾಲ್ ಸಾವನ್ನಪ್ಪಿದ್ದರು.
ಉಮೇಶ್ ಪಾಲ್ ಹತ್ಯೆಯ ನಂತರ ಈ ಪ್ರಕರಣದ ಹಲವು ಆರೋಪಿಗಳು ಹತ್ಯೆಯಾಗಿದ್ದಾರೆ. ಫೆಬ್ರವರಿ 24 ರಂದು ಹಂತಕರ ವಾಹನದ ಚಾಲಕನಾಗಿದ್ದ ಅರ್ಬಾಜ್ ಫೆಬ್ರವರಿ 27 ರಂದು ಪ್ರಯಾಗರಾಜ್‌ನಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ ಕೊಲ್ಲಲ್ಪಟ್ಟರು. ಮಾರ್ಚ್ 6 ರಂದು ಪ್ರಯಾಗ್‌ರಾಜ್‌ನಲ್ಲಿ ನಡೆದ ಮತ್ತೊಂದು ಎನ್‌ಕೌಂಟರ್‌ನಲ್ಲಿ ಉಸ್ಮಾನ್ ಕೊಲ್ಲಲ್ಪಟ್ಟರು, ಏಪ್ರಿಲ್ 13 ರಂದು ಝಾನ್ಸಿಯಲ್ಲಿ ಅಸದ್ ಮತ್ತು ಗುಲಾಮ್ ಅವರನ್ನು ಪೊಲೀಸರು ಕೊಂದರು. ಅತೀಕ್ ಅವರ ಪತ್ನಿ ಶೈಸ್ತಾ ಪರ್ವೀನ್ ಪರಾರಿಯಾಗಿದ್ದಾರೆ. ಉಮರ್ ಮತ್ತು ಅಲಿ, ಪೊಲೀಸರ ಕಣ್ಗಾವಲಿನಲ್ಲಿ ಜೈಲಿನಲ್ಲಿದ್ದಾರೆ.