ರಸ್ತೆ ಗುಂಡಿಗಳು ಕೇವಲ ನಮ್ಮ ದೇಶದಲ್ಲಿ ಮಾತ್ರವಲ್ಲ, ಪಾಶ್ಚಾತ್ಯ ದೇಶಗಳಲ್ಲೂ ಸಹ ಜನರಿಗೆ ಭಾರೀ ಕಿರಿಕಿರಿ ಮಾಡಿಕೊಂಡು ಬರುತ್ತಿವೆ. ರಸ್ತೆಗಳ ಅನ್ವೇಷಣೆಯಷ್ಟೇ ಹಳೆಯ ಸಮಸ್ಯೆಯಾದ ರಸ್ತೆ ಗುಂಡಿಗಳ ಕಾರಣ ಲೆಕ್ಕವಿಲ್ಲದಷ್ಟು ಜನ ಪ್ರಾಣ ಕಳೆದುಕೊಂಡಿದ್ದಾರೆ.
ಬ್ರಿಟನ್ ವ್ಯಕ್ತಿಯೊಬ್ಬರು ತಮ್ಮ ದೇಶದ ರಸ್ತೆಗಳ ಗುಂಡಿಗಳಿಂದ ರೋಸಿ ಹೋಗಿದ್ದು, ಹತಾಶೆ ಕಾರಿಕೊಳ್ಳಲೆಂದು ಅವುಗಳಲ್ಲಿ ನೂಡಲ್ಸ್ ಬೇಯಿಸಲು ಆರಂಭಿಸಿದ್ದಾರೆ. ಮಾರ್ಕ್ ಮೋರೆಲ್ ಹೆಸರಿನ ಈತ ಬ್ರಿಟನ್‌ನಲ್ಲಿ ಮಿ. ಪಾಟ್‌ಹೋಲ್ ಎಂದು ಕರೆಯಲಾಗುತ್ತದೆ.
ರಸ್ತೆ ಗುಂಡಿಗಳಲ್ಲಿ ನೂಡಲ್ಸ್ ಬೇಯಿಸುವ ಮೂಲಕ ವಿನೂತನ ಪ್ರತಿಭಟನೆಯೊಂದನ್ನು ಮಾಡಿ, ಬ್ರಿಟನ್ ಸರ್ಕಾರಕ್ಕೆ ಈ ರಸ್ತೆ ಗುಂಡಿಗಳನ್ನು ಸರಿ ಪಡಿಸಲು ಕೋರುತ್ತಿದ್ದಾರೆ ಮೋರೆಲ್.
“ಬ್ರಿಟನ್ ರಸ್ತೆಗಳ ದಯನೀಯ ಸ್ಥಿತಿಯನ್ನು ಎತ್ತಿ ತೋರಿಸಲು ಪಾಟ್ ನೂಡಲ್ಸ್‌ಗಿಂತ ಸೂಕ್ತವಾದ ಆಯ್ಕೆ ಎಲ್ಲಿದೆ?” ಎಂದು ಮೆಟ್ರೋ ಯೂಕೆಗೆ ಕೊಟ್ಟ ಸಂದರ್ಶನದಲ್ಲಿ ಮಾರ್ಕ್ ತಿಳಿಸಿದ್ದಾರೆ.
2023ರ ಸ್ಪ್ರಿಂಗ್ ಬಜೆಟ್‌ನಲ್ಲಿ ಬ್ರಿಟನ್‌ನ ರಸ್ತೆಗಳ ರಿಪೇರಿಗೆಂದು £200 ದಶಲಕ್ಷ (2,036.61 ಕೋಟಿ ರೂ.) ಘೋಷಿಸಲಾಗಿದೆ. ಆದರೆ ವರದಿಗಳ ಪ್ರಕಾರ, ದೇಶದ ರಸ್ತೆ ಗುಂಡಿಗಳನ್ನು ಸರಿ ಮಾಡಲು £14 ಶತಕೋಟಿ (1.44 ಲಕ್ಷ ಕೋಟಿ ರೂ.) ತಗಲುತ್ತದೆ.