ಛತ್ತೀಸ್‌ಗಢದ ನಾರಾಯಣಪುರದಲ್ಲಿ ಶನಿವಾರ ನಕ್ಸಲರು ನಡೆಸಿದ ಬಾಂಬ್ ಸ್ಫೋಟದಲ್ಲಿ ಇಂಡೋ-ಟಿಬೆಟಿಯನ್ ಬಾರ್ಡರ್ ಪೊಲೀಸ್(ಐಟಿಬಿಪಿ)ಯ ಇಬ್ಬರು ಯೋಧರು ಹುತಾತ್ಮರಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಅಬುಜ್ಮದ್‌ನಲ್ಲಿ ನಕ್ಸಲ್ ವಿರೋಧಿ ಶೋಧ ಕಾರ್ಯಾಚರಣೆ ಮುಗಿಸಿ ಹಿಂದಿರುಗುತ್ತಿದ್ದ ತಂಡದ ಮೇಲೆ ನಕ್ಸಲರು ಸುಧಾರಿತ ಸ್ಫೋಟಕ ಸಾಧನ(ಐಇಡಿ) ಸ್ಫೋಟಿಸಿದ್ದಾರೆ.
ಇಬ್ಬರು ಯೋಧರನ್ನು ಮಹಾರಾಷ್ಟ್ರದ ಸತಾರಾ ಮೂಲದ 36 ವರ್ಷದ ಅಮರ್ ಪನ್ವಾರ್ ಮತ್ತು 36 ವರ್ಷದ ಆಂಧ್ರಪ್ರದೇಶದ ಕಾಡಪ್ಪ ಮೂಲದ ಕೆ. ರಾಜೇಶ್ ಎಂದು ಗುರುತಿಸಲಾಗಿದೆ. ಇಬ್ಬರೂ ಯೋಧರು ಐಟಿಬಿಪಿಯ 53ನೇ ಬೆಟಾಲಿಯನ್‌ಗೆ ಸೇರಿದವರು ಎಂದು ನಾರಾಯಣಪುರ ಎಸ್ಪಿ ಪ್ರಭಾತ್ ಕುಮಾರ್ ಖಚಿತಪಡಿಸಿದ್ದಾರೆ.
ಅಧಿಕಾರಿಗಳ ಪ್ರಕಾರ, ನಾರಾಯಣಪುರ ಜಿಲ್ಲೆಯ ಓರ್ಚಾ, ಮೊಹಂದಿ ಮತ್ತು ಇರ್ಕಭಟ್ಟಿಯಿಂದ ಐಟಿಬಿಪಿ, ಬಾರ್ಡರ್ ಸೆಕ್ಯುರಿಟಿ ಫೋರ್ಸ್(ಬಿಎಸ್‌ಎಫ್) ಮತ್ತು ಡಿಸ್ಟ್ರಿಕ್ಟ್ ರಿಸರ್ವ್ ಗಾರ್ಡ್(ಡಿಆರ್‌ಜಿ) ಜಂಟಿ ತಂಡವು ಕಾರ್ಯಾಚರಣೆಗಾಗಿ ಧುರ್ಬೇಡಕ್ಕೆ ತೆರಳಿತ್ತು.
ಶನಿವಾರ ಮಧ್ಯಾಹ್ನ 12 ಗಂಟೆಯ ಸುಮಾರಿಗೆ ಕಾರ್ಯಾಚರಣೆ ಮುಗಿಸಿ ಹಿಂದಿರುಗುತ್ತಿದ್ದಾಗ ಕೊಡ್ಲಿಯರ್ ಗ್ರಾಮದ ಅರಣ್ಯದಲ್ಲಿ ನಡೆದ ಸ್ಫೋಟದಲ್ಲಿ ಇಬ್ಬರು ಯೋಧರು ಮೃತಪಟ್ಟರೆ, ನಾರಾಯಣಪುರ ಜಿಲ್ಲಾ ಪೊಲೀಸ್‌ನ ಇಬ್ಬರು ಯೋಧರು ಗಾಯಗೊಂಡಿದ್ದು, ಅವರ ಸ್ಥಿತಿ ಸ್ಥಿರವಾಗಿದೆ.