ಅಡುಗೆ ಮನೆ ಕೆಲಸವೆಂದರೆ ಅದು ಯಾವತ್ತಿಗೂ ಮುಗಿಯದ ಕೆಲಸ ಎಂದು ಅಮ್ಮಂದಿರೂ ಹೇಳುವುದನ್ನು ಕೇಳಿರುತ್ತಿರಿ. ಮನೆ ತುಂಬಾ ಜನರಿದ್ದರೆ ಬೇಯಿಸಿ, ಬಡಿಸುವುದೇ ದೊಡ್ಡ ಕೆಲಸವಾಗುತ್ತದೆ.
ಹಾಗಾದ್ರೆ ಈ ಕೆಲಸವನ್ನು ಸುಲಭವಾಗಿಸುವುದಕ್ಕೆ ಆಗಲ್ವಾ? ಆಗುತ್ತೆ ಆದರೆ ಅದಕ್ಕೊಂದು ಸರಿಯಾದ ವಿಧಾನ ಪಾಲಿಸಬೇಕು. ಬೆಳಿಗ್ಗೆದ್ದು ತಿಂಡಿಗೆ ಏನು ಮಾಡಲಿ ಎಂದು ತಲೆಕೆರೆದುಕೊಂಡರೆ ಏನೋ ಮಾಡುವುದಕ್ಕೆ ಹೋಗಿ ಇನ್ನೇನೋ ಆಗುವುದೇ ಹೆಚ್ಚು. ಹಾಗಾಗಿ ವಾರವಿಡೀ ಏನು ತಿಂಡಿ, ಏನು ಸಾಂಬಾರು ಮಾಡಬೇಕು ಎಂಬುದನ್ನು ಮೊದಲೇ ಯೋಚಿಸಿ ಅಥವಾ ಒಂದು ಕಾಗದದಲ್ಲಿ ಬರೆದು ಇಟ್ಟುಕೊಳ್ಳಿ.
ಮನೆಯಲ್ಲಿ ಇರುವ ಒಬ್ಬೊಬ್ಬರಿಗೆ ಒಂದೊಂದು ಬಗೆಯ ತಿಂಡಿ, ಸಾಂಬಾರು ಇಷ್ಟವಾಗುತ್ತೆ. ಹಾಗಾಗಿ ಒಂದು ಪಟ್ಟಿ ಮಾಡಿಕೊಂಡರೆ ಒಂದೊಂದು ದಿನ ಒಂದೊಂದು ರೀತಿ ಅಡುಗೆ ಮಾಡಿದ ಹಾಗೇ ಆಗುತ್ತದೆ. ಎಲ್ಲರ ಇಷ್ಟವನ್ನೂ ಪೂರೈಸಿದ ಹಾಗೇ ಆಗುತ್ತದೆ. ಇದರ ಜತೆಗೆ ನಿಮ್ಮಿಷ್ಟದ ಅಡುಗೆಯೂ ಈ ಪಟ್ಟಿಯಲ್ಲಿ ಇರಲಿ!
ತರಕಾರಿಯನ್ನು ಮೊದಲೇ ಕತ್ತರಿಸಿ ಇಟ್ಟುಕೊಂಡು ಒಂದು ಏರ್ ಟೈಟ್ ಡಬ್ಬದಲ್ಲಿ ಹಾಕಿ ಫ್ರಿಡ್ಜ್ ನಲ್ಲಿಡಿ. ಬೆಳಿಗ್ಗೆ ಎದ್ದಾಗ ಉಪಯೋಗಿಸಬಹುದು. ಹಾಗೇ ತೆಂಗಿನಕಾಯಿಯನ್ನು ಕೂಡ ತುರಿದು ಇಟ್ಟುಕೊಳ್ಳಿ. ಇದರಿಂದ ಬೆಳಿಗ್ಗೆ ಕತ್ತರಿಸುವುದು, ತುರಿಯುವ ಕೆಲಸದಿಂದ ನೆಮ್ಮದಿ ಸಿಗುತ್ತದೆ.
ಇನ್ನು ಅವರವರು ತಿಂದು, ಕುಡಿದ ತಟ್ಟೆ, ಲೋಟಗಳನ್ನು ಅವರವರೇ ಕ್ಲೀನ್ ಮಾಡುವುದಕ್ಕೆ ಹೇಳಿ. ಇದರಿಂದ ಪಾತ್ರೆ ತೊಳೆಯುವ ಕೆಲಸವೂ ಕೂಡ ನಿಮಗೆ ಸುಲಭದಲ್ಲಿ ಆಗುತ್ತದೆ.
ಟಿವಿ ನೋಡುತ್ತಾ, ಮಕ್ಕಳ ಜೊತೆ ಮಾತನಾಡುತ್ತಾ ಚಿಕ್ಕ ಚಿಕ್ಕ ಕೆಲಸ ಮಾಡಿಕೊಂಡರೆ ಉದಾ. ಬೆಳ್ಳುಳ್ಳಿ ಬಿಡಿಸುವುದು, ಸೊಪ್ಪು ಸೋಸಿಕೊಳ್ಳೋದು ಹೀಗೆ ಮಾಡಿಕೊಂಡರೆ ನಿಮ್ಮ ಕೆಲಸವೂ ಸುಲಭವಾಗುತ್ತೆ.