ತಲೆನೋವು ಎಲ್ಲರಿಗೂ ಇರುವ ಸಮಸ್ಯೆ. ಒಮ್ಮೆ ತಲೆನೋವು ಶುರುವಾಯ್ತು ಅಂದ್ರೆ ಒಂಥರಾ ಕಿರಿಕಿರಿ. ಅದು ಕಡಿಮೆಯಾಗುವವರೆಗೂ ನೆಮ್ಮದಿಯಿರೋದಿಲ್ಲ. ದೀರ್ಘಕಾಲದಿಂದ ನೀವೇನಾದ್ರೂ ತಲೆನೋವು ಅನುಭವಿಸುತ್ತಿದ್ದರೆ ಆದಷ್ಟು ಬೇಗ ವೈದ್ಯರನ್ನು ಭೇಟಿ ಮಾಡಿ.
ಟೆನ್ಷನ್ ನಿಂದ ಬರುವ ತಲೆನೋವು, ಮೈಗ್ರೇನ್, ಕ್ಲಸ್ಟರ್ ತಲೆನೋವು ಮತ್ತು ಹೆಮಿಕ್ರೇನಿಯಾ ಕಾಂಟಿವಾ ಎಂಬ ನಾಲ್ಕು ರೀತಿಯ ತಲೆನೋವುಗಳಿವೆ. ಟೆನ್ಷನ್ ನಿಂದ ಬಂದ ತಲೆನೋವಾಗಿದ್ದರೆ, ನಿಮ್ಮ ತಲೆಯ ಸುತ್ತಲೂ ಬ್ಯಾಂಡ್ ಬಿಗಿಯಾಗಿ ಸುತ್ತಿಕೊಂಡಂತೆ ಅನಿಸುತ್ತದೆ.
ಮೈಗ್ರೇನ್ ಆಗಿದ್ರೆ ದೇಹವೇ ದುರ್ಬಲಗೊಂಡಂತಾಗುತ್ತದೆ. ಸುಮಾರು 12 ರಿಂದ 72 ಗಂಟೆಗಳ ಕಾಲ ಮೈಗ್ರೇನ್ ನಿಮ್ಮನ್ನು ಕಾಡಬಹುದು. ಕ್ಲಸ್ಟರ್ ತಲೆನೋವು ಬಂದು ಹೋಗಿ ಆಗುತ್ತಲೇ ಇರುತ್ತದೆ. ತಲೆಯ ಒಂದು ಬದಿಯಲ್ಲಿ ನೋವುಂಟುಮಾಡುತ್ತದೆ. ಹೆಮಿಕ್ರೇನಿಯಾ ತಲೆನೋವು ಮೈಗ್ರೇನ್ ಅನ್ನೇ ಹೋಲುತ್ತದೆ.
ತಲೆನೋವು ಬರಲು ನಮಗೆ ಅರಿವಿಲ್ಲದ ಕೆಲವು ಕಾರಣಗಳಿವೆ. ಅತಿಯಾದ ಕಾಫಿ ಸೇವನೆ ಕೂಡ ಇವುಗಳಲ್ಲೊಂದು. ಕಾಫಿ ಕುಡಿದ್ರೆ ಎಚ್ಚರವಾಗಿ, ಸಕ್ರಿಯವಾಗಿರಬಹುದು ಎಂಬುದು ಎಲ್ಲರ ಭಾವನೆ. ಆದ್ರೆ ಅತಿಯಾದ ಕಾಫಿ ಸೇವನೆಯಿಂದ ಹೆಚ್ಚು ಕೆಫೀನ್, ದೇಹಕ್ಕೆ ಪ್ರವೇಶಿಸಿದಾಗ, ರಕ್ತನಾಳಗಳನ್ನು ಕಿರಿದಾಗಿಸುತ್ತದೆ, ಮೆದುಳಿಗೆ ಮತ್ತು ಇತರ ಅಂಗಗಳಿಗೆ ರಕ್ತದ ಹರಿವನ್ನು ಸೀಮಿತಗೊಳಿಸುತ್ತದೆ.
ಡಿಹೈಡ್ರೇಶನ್ ಕೂಡ ತಲೆನೋವಿಗೆ ಪ್ರಮುಖ ಕಾರಣ. ದೇಹದಲ್ಲಿ ದ್ರವದ ಅಂಶ ಕಡಿಮೆಯಾದಾಗ ಮೆದುಳಿನ ತಾತ್ಕಾಲಿಕ ಕುಗ್ಗುವಿಕೆಗೆ ಕಾರಣವಾಗುತ್ತದೆ. ಇದು ತಲೆಯಲ್ಲಿ ನೋವು ಉಂಟು ಮಾಡುತ್ತದೆ. ನೀವು ನೀರು ಕುಡಿದ ನಂತರ ಅದು ಮಾಯವಾಗಬಹುದು.
ಇನ್ನು ಹಾರ್ಮೋನುಗಳ ಸಮಸ್ಯೆಗಳು ಕೂಡ ತಲೆನೋವಿಗೆ ಮೂಲ. ಹಾರ್ಮೋನುಗಳ ಮಟ್ಟವು ಇಳಿಯುವುದರಿಂದ ತಲೆನೋವು ಉಂಟಾಗುತ್ತದೆ. ಮಹಿಳೆಯರಲ್ಲಿ ಈಸ್ಟ್ರೊಜೆನ್ ಹಾರ್ಮೋನುಗಳ ಕೊರತೆಯು ಈ ಸಮಸ್ಯೆಗೆ ಕಾರಣವಾಗಬಹುದು. ಗರ್ಭಾವಸ್ಥೆಯಲ್ಲಿ ಮಹಿಳೆಯ ಈಸ್ಟ್ರೊಜೆನ್ ಮಟ್ಟವು ಏರಿಳಿತಗೊಳ್ಳುತ್ತದೆ ಮತ್ತು ಅದು ತಲೆನೋವಿಗೆ ಕಾರಣವಾಗಬಹುದು.
ತುಂಬಾ ಸಮಯದ ವರೆಗೆ ಸ್ಕ್ರೀನ್ ನೋಡುವುದರಿಂದ್ಲೂ ತಲೆನೋವು ಆವರಿಸಿಕೊಳ್ಳುತ್ತದೆ. ಲ್ಯಾಪ್‌ಟಾಪ್, ಸೆಲ್‌ಫೋನ್ ಮುಂತಾದ ಗ್ಯಾಜೆಟ್‌ನಿಂದ ಹೊರಸೂಸುವ ನೀಲಿ ಬೆಳಕು ಕಡಿಮೆ ತರಂಗಾಂತರವನ್ನು ಹೊಂದಿರುತ್ತದೆ. ಈ ನೀಲಿ ಬೆಳಕಿಗೆ ದೀರ್ಘಕಾಲ ಒಡ್ಡಿಕೊಳ್ಳುವುದರಿಂದ ನಿಮ್ಮ ಕಣ್ಣುಗುಡ್ಡೆಗಳಿಗೆ ನೋವುಂಟಾಗುತ್ತದೆ ಮತ್ತು ತಲೆನೋವು ಶುರುವಾಗುತ್ತದೆ.