
ತಮ್ಮ ಮನೆ ಬಾಗಿಲಿಗೇ ತಾಜಾ ಹಾಲು ಬರುವ ಭಾಗ್ಯ ಎಲ್ಲರಿಗೂ ಇರುವುದಿಲ್ಲ. ಕೆಲವೊಮ್ಮೆ ಜನರು ತಮ್ಮ ಹತ್ತಿರದ ಹಾಲು ವ್ಯಾಪಾರಿಗಳತ್ತ ತೆರಳಿ ಹಾಲಿನ ಪ್ಯಾಕೆಟ್ಗಳನ್ನು ಖರೀದಿ ಮಾಡುತ್ತಾರೆ. ಇನ್ನೈದು ನಿಮಿಷ ಮಲಗಬಹುದಾದ ಅವಕಾಶ ಸಿಕ್ಕರೆ ಎಷ್ಟು ಚಂದ ಎಂದು ಜನರಿಗೆ ಪದೇ ಪದೇ ಅನಿಸುತ್ತಲೇ ಇರುತ್ತದೆ.
ಆದರೆ ಎಲ್ಲಿಗೆ ಬೇಕಾದರೂ ಸಂಚರಿಸಬಲ್ಲ ಹಾಲಿನ ಎಟಿಎಂ ನಿಮ್ಮ ಮನೆ ಬಾಗಿಲಿಗೇ ತನ್ನಿಂತಾನೇ ಬರಲಿದೆ ಎಂದು ನಾವು ನಿಮಗೆ ತಿಳಿಸಿದರೆ ನಂಬುತ್ತೀರಾ ? ಬಿಹಾರದ ಭಾಗಲ್ಪುರದ ನಿವಾಸಿ ವಿನಯ್ ಕುಮಾರ್ ಇಂಥ ಒಂದು ಐಡಿಯಾವನ್ನು ನಿಜರೂಪಕ್ಕೆ ತಂದಿದ್ದು, ಕೃಷಿ ಮೇಳದಲ್ಲಿ ಭಾರೀ ಚರ್ಚೆಗೆ ಚಾಲನೆ ನೀಡಿದ್ದಾರೆ.
ಸ್ಥಳೀಯರ ಬೇಡಿಕೆಗಳನ್ನು ಪೂರೈಸಲು ವಿನಯ್ ಕುಮಾರ್ ತಮ್ಮ ಅಂಗಡಿಯೊಳಗೆ ಸಣ್ಣದೊಂದು ಎಟಿಎಂ ಸ್ಥಾಪಿಸಿದ್ದರು ಎಂದು ಈ ಟಿವಿ ಭಾರತ್ ಈ ಹಿಂದೆ ವರದಿ ಮಾಡಿತ್ತು. ಆದರೆ ದಿನೇ ದಿನೇ ಬೇಡಿಕೆ ಹೆಚ್ಚುತ್ತಿರುವುದನ್ನು ಗ್ರಹಿಸಿದ ವಿನಯ್ ಕುಮಾರ್, ಹಾಲಿನ ಎಟಿಎಂಗೆ ಚಕ್ರಗಳನ್ನು ಅಳವಡಿಸಿ ಅದನ್ನು ಮೊಬೈಲ್ ಆಗಿ ಪರಿವರ್ತಿಸಿದ್ದಾರೆ. ಮೊದಲ ತಿಂಗಳು ಪ್ರತಿನಿತ್ಯ ಮೊದಲು ಬರುವ 100 ಗ್ರಾಹಕರಿಗೆ ಪ್ರತಿ ಲೀಟರ್ ಮೇಲೆ 50 ಪೈಸೆಯಷ್ಟು ರಿಯಾಯಿತಿ ಕೊಡುವುದನ್ನು ಆರಂಭಿಸಿದ್ದರು ವಿನಯ್ ಕುಮಾರ್.
ಈ ಮುನ್ನ ವಿಮಾ ಸಂಸ್ಥೆಯೊಂದರಲ್ಲಿ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದ ವಿನಯ್ ಕುಮಾರ್, ಈ ಕೆಲಸ ಬಿಟ್ಟು ತಮ್ಮದೇ ಸ್ಟಾರ್ಟ್ಅಪ್ ಒಂದನ್ನು ಸ್ಥಾಪಿಸಲು ಒಂದು ವರ್ಷದ ಮಟ್ಟಿಗೆ ಸಂಶೋಧನೆಯಲ್ಲಿ ತೊಡಗಿದರು. ಈ ಸಂಬಂಧ ಭಾಗಲ್ಪುರದಲ್ಲಿರುವ ಆತ್ಮಾ ಕೃಷಿ ಸಂಸ್ಥೆಯಲ್ಲಿ ತರಬೇತಿಯನ್ನೂ ಪಡೆದರು ವಿನಯ್ ಕುಮಾರ್.
35 ರೈತರನ್ನು ಒಗ್ಗೂಡಿಸಿಕೊಂಡು ತಮ್ಮದೇ ಆದ ಜಾಲ ಸ್ಥಾಪಿಸುವ ಮೂಲಕ ಮೊಬೈಲ್ ಹಾಲಿನ ಎಟಿಎಂಅನ್ನು ಭಾಗಲ್ಪುರದ ವಿವಿಧ ಪ್ರದೇಶಗಳಿಗೆ ಹಾಲಿನ ಡೆಲಿವರಿ ಮಾಡಲು ಆರಂಭಿಸಿದರು ವಿನಯ್ ಕುಮಾರ್. ತಾವು ಇದಕ್ಕೆ ಸರ್ಕಾರದಿಂದ ಯಾವುದೇ ನೆರವನ್ನು ಪಡೆದಿಲ್ಲ ಎನ್ನುತ್ತಾರೆ ಅವರು.
