90 ರ ದಶಕದಲ್ಲಿ ತಮಿಳು ಚಿತ್ರರಂಗದಲ್ಲಿ ಭಾರೀ ಹೆಸರು ಮಾಡಿದ್ದ ನಟರೊಬ್ಬರು ಒಂದು ಹಂತದಲ್ಲಿ ಸಿನಿಮಾ ಅವಕಾಶಗಳಿಲ್ಲದೇ ಇಲ್ಲದೇ ಟ್ಯಾಕ್ಸಿ ಡ್ರೈವರ್ ಆಗಿ, ಶೌಚಾಲಯ ಕ್ಲೀನ್ ಮಾಡುವ ಕೆಲಸವನ್ನೂ ಮಾಡಿದ್ದಾರೆ. ಅವರೇ ಸ್ಫುರದ್ರೂಪಿ ನಟನಾಗಿದ್ದ ಅಬ್ಬಾಸ್.
90 ರ ದಶಕದಲ್ಲಿ ಕಾಲಿವುಡ್ ನಲ್ಲಿ ರಜನಿಕಾಂತ್ ಮತ್ತು ಕಮಲ್ ಹಾಸನ್ ಅವರು ಹೆಚ್ಚು ವೈವಿಧ್ಯಮಯ ಸಿನಿಮಾಗಳನ್ನು ಪ್ರಯೋಗಿಸುತ್ತಿದ್ದಾಗ, ತಮಿಳು ಚಿತ್ರರಂಗವು ತನ್ನ ಮುಂದಿನ ಸೂಪರ್‌ಸ್ಟಾರ್‌ಗಾಗಿ ಹುಡುಕುತ್ತಿತ್ತು. ಅರವಿಂದ್ ಸ್ವಾಮಿಯಿಂದ ಹಿಡಿದು ದಳಪತಿ ವಿಜಯ್ ವರೆಗೆ ಅನೇಕ ಯುವ ನಟರು ಸ್ಥಾನಕ್ಕಾಗಿ ಪೈಪೋಟಿ ನಡೆಸುತ್ತಿದ್ದರು. ಆದರೆ ಅವುಗಳಲ್ಲಿ ಒಂದು ಹೆಸರು ಮುಂಚೂಣಿಯಲ್ಲಿತ್ತು. ಅದುವೇ ಅಬ್ಬಾಸ್.
ಅವರ ಬಳಿ ಯಶಸ್ವಿ ಚಲನಚಿತ್ರಗಳು, ದೊಡ್ಡ ನಿರ್ದೇಶಕರು ಮತ್ತು ದೊಡ್ಡ ಅಭಿಮಾನಿ ಬಳಗವೇ ಇತ್ತು. ಆದರೆ 30 ವರ್ಷ ವಯಸ್ಸಿಗೂ ಮುಂಚೆಯೇ ಅವರು ದಿವಾಳಿಯಾದರು. ಸಿನಿಮಾಗಳನ್ನು ಬಿಟ್ಟು ಹಣ ಸಂಪಾದಿಸಲು ಟ್ಯಾಕ್ಸಿ ಓಡಿಸುವುದು ಮತ್ತು ಶೌಚಾಲಯಗಳನ್ನು ಸ್ವಚ್ಛಗೊಳಿಸುವಂತಹ ಕೆಲಸಗಳನ್ನು ಆಶ್ರಯಿಸಬೇಕಾಯಿತು. ಇದು ಒಂದು ಕಾಲದಲ್ಲಿ ಯಶಸ್ವಿ ನಟನಾಗಿದ್ದ ಅಬ್ಬಾಸ್ ಜೀವನದ ಕಹಿ ಹಂತಗಳು.
1975 ರಲ್ಲಿ ಜನಿಸಿದ ಅಬ್ಬಾಸ್ ಹದಿಹರೆಯದ ವಯಸ್ಸಿನಲ್ಲಿ ಬೆಂಗಳೂರಿನಲ್ಲಿ ಮಾಡೆಲಿಂಗ್ ಮೂಲಕ ವೃತ್ತಿಜೀವನವನ್ನು ಪ್ರಾರಂಭಿಸಿದರು. 1996 ರ ಕಾದಲ್ ದೇಶಂ ಚಿತ್ರದ ಯಶಸ್ಸು ಅವರನ್ನು ರಾತ್ರೋರಾತ್ರಿ ಸ್ಟಾರ್ ಮಾಡಿತು . ಅವರ ಮುಂದಿನ ಕೆಲವು ಚಿತ್ರಗಳು ಗಲ್ಲಾಪೆಟ್ಟಿಗೆಯಲ್ಲಿ ವಿಫಲವಾದ ನಂತರ, ಅಬ್ಬಾಸ್ ರಜನಿಕಾಂತ್-ನಟನೆಯ ಪಡಯಪ್ಪದಲ್ಲಿ ಕಾಣಿಸಿಕೊಂಡರು ಮತ್ತು ಕಮಲ್ ಹಾಸನ್ ಅವರ ಹೇ ರಾಮ್ ನಲ್ಲಿ ಪೋಷಕ ಪಾತ್ರವನ್ನು ಮಾಡಿದರು. ನಂತರ ಅವರು ಐಶ್ವರ್ಯಾ ರೈ, ಅಜಿತ್ ಮತ್ತು ಟಬು ಅವರೊಂದಿಗೆ ಕಂಡುಕೊಂಡೇನ್ ಕಂಡುಕೊಂಡೇನ್‌ನಲ್ಲಿ ಕೆಲಸ ಮಾಡಿದರು. ಅದು ಅವರ ವೃತ್ತಿಜೀವನಕ್ಕೆ ತಿರುವು ಕೊಟ್ಟಿತು. ಮಿನ್ನಲೆ, ಆನಂದಂ ಮತ್ತು ಪಮ್ಮಲ್ ಕೆ, ಸಂಬಂಧಂನಂತಹ ಹಿಟ್ ಚಿತ್ರಗಳಲ್ಲಿ ಕೆಲಸ ಮಾಡಿದರು.
ನಂತರ ಆಗಿದ್ದು ಅಬ್ಬಾಸ್ ವೃತ್ತಿ ಬದುಕಿಗೆ ದೊಡ್ಡ ಹೊಡೆತ ನೀಡಿತು. 2000 ರ ದಶಕದ ಮಧ್ಯಭಾಗದಲ್ಲಿ ಅಬ್ಬಾಸ್ ಅವರನ್ನು ತಮಿಳು ಚಲನಚಿತ್ರಗಳಲ್ಲಿ ಪೋಷಕ ಪಾತ್ರಗಳಿಗೆ ಮೀಸಲಿಡಲಾಯ್ತು. ಬಿಪಾಶಾ ಬಸು ಜೊತೆಗಿನ ಹಿಂದಿ ಚಿತ್ರವೊಂದು ರದ್ದಾಗಿತ್ತು. 2014 ರ ನಂತರ ಅವರು ತಮ್ಮ ನಟನೆಯ ಆಸಕ್ತಿಯು ಮರೆಯಾಗುತ್ತಿರುವುದನ್ನು ಕಂಡು ಅವರು ನಟನೆಯನ್ನು ತೊರೆದು ನ್ಯೂಜಿಲೆಂಡ್‌ಗೆ ತೆರಳಿದರು. ಕೆಲವು ವರದಿಗಳು ಅಬ್ಬಾಸ್ ನ್ಯೂಜಿಲೆಂಡ್ ನಲ್ಲಿ ಆರ್ಥಿಕ ಸಂಕಷ್ಟದಿಂದಾಗಿ ಕಷ್ಟ ಪಡಬೇಕಾಯಿತು ಎಂದು ಹೇಳಿವೆ.
ವರದಿಗಳ ಪ್ರಕಾರ ಅಲ್ಲಿ ಮಾಜಿ ನಟ ಅಬ್ಬಾಸ್ ಹಣ ಸಂಪಾದಿಸಲು ಮೆಕ್ಯಾನಿಕ್ ಮತ್ತು ಟ್ಯಾಕ್ಸಿ ಡ್ರೈವರ್ ಆಗಿ ಕೆಲಸ ಮಾಡಲು ಮತ್ತು ಸಾಂದರ್ಭಿಕವಾಗಿ ಶೌಚಾಲಯಗಳನ್ನು ಸ್ವಚ್ಛಗೊಳಿಸುವ ಕೆಲಸಕ್ಕೂ ಮುಂದಾಗಿದ್ದರು. ಅಂತಿಮವಾಗಿ ಅವರು ಮೋಟಿವೇಷನಲ್ ಸ್ಪೀಕರ್ ಆದರು. ಇದೀಗ ಅವರು ಅಲ್ಲೇ ನೆಲೆಸಿದ್ದಾರೆ. ಆದರೆ ಇತ್ತೀಚಿಗೆ ತಮಿಳಿನ ಬಿಗ್ ಬಾಸ್ ಸೀಸನ್ ನಲ್ಲಿ ಅಬ್ಬಾಸ್ ಕಾಣಿಸಿಕೊಳ್ಳಲಿದ್ದಾರೆ ಎಂಬ ವದಂತಿಗಳು ಹಬ್ಬಿದ್ದವು. ಆದರೆ ಅಕ್ಟೋಬರ್ 1 ರಂದು ಆರಂಭವಾಗಿರುವ ಬಿಸ್ ಬಾಸ್ ನಲ್ಲಿ ಅವರು ಕಾಣಿಸಿಕೊಂಡಿಲ್ಲ. ನ್ಯೂಜಿಲೆಂಡ್‌ನಲ್ಲಿ ನೆಲೆಸಿದ್ದು ಭಾರತೀಯರ ಜನಮನದಿಂದ ದೂರ ಉಳಿದಿದ್ದಾರೆ.