ಕೆಲವೊಮ್ಮೆ ನಾವು ಮಾಡುವ ಸಣ್ಣ ತಪ್ಪಿನಿಂದ ಜೀವಮಾನವಿಡೀ ಪಶ್ಚಾತ್ತಾಪ ಪಡಬೇಕಾಗುತ್ತದೆ. ಮಾತೇ ಮುತ್ತು, ಮಾತೇ ಮೃತ್ಯು ಅನ್ನುವ ಮಾತಿನಂತೆ ಕೆಲವೊಮ್ಮೆ ನಾವು ಯೋಚಿಸದೇ ಆಡುವ ಮಾತಿನಿಂದ ಸಂಬಂಧಗಳು ಹಾಳಾಗುವುದು ಹೆಚ್ಚು. ಹಾಗಾಗಿ ಮಾತನಾಡುವಾಗ ಯೋಚಿಸಿ ಮಾತನಾಡಬೇಕು.
ಇನ್ನು ಕೆಲವರು ತಮ್ಮ ಮನೆಯ ಎಲ್ಲಾ ವಿಚಾರಗಳನ್ನು ನೆರೆ ಮನೆಯವರ ಬಳಿ ಹೇಳುತ್ತಾರೆ. ಇದರಿಂದ ಅವರ ಸಂಸಾರದ ಘನತೆ ಕುಂದುತ್ತದೆ ಎಂಬ ಅರಿವು ಕೂಡ ಇರುವುದಿಲ್ಲ. ಎಷ್ಟೇ ಆತ್ಮೀಯರಾದರು ಅವರ ಬಳಿ ನಿಮ್ಮ ಮನೆಯ ಎಲ್ಲಾ ವಿಷಯವನ್ನು ಹೇಳಬೇಡಿ. ಇದರಿಂದ ಅನಾಹುತಗಳೇ ಹೆಚ್ಚು.
ಇನ್ನು ಕೆಲವರು ಅತ್ತೆ ಬಗ್ಗೆ ದೂರುವುದು, ಸೊಸೆ ಬಗ್ಗೆ ದೂರುವುದು ಮಾಡುತ್ತಿರುತ್ತಾರೆ. ಇಬ್ಬರ ಜಗಳ ಮೂರನೇಯವರಿಗೆ ಲಾಭ ಅನ್ನುವಂತೆ ಕೆಲವರು ಸಂಬಂಧಗಳ ಮಧ್ಯೆ ಹುಳಿ ಹಿಂಡುವವರೇ ಜಾಸ್ತಿ ಇರುತ್ತಾರೆ ಹಾಗಾಗಿ ಯಾರ ಬಗ್ಗೆಯಾದರು ದೂರುವ ಮೊದಲು ಯೋಚಿಸಿ.
ಇನ್ನು ಆತ್ಮೀಯ ಗೆಳಯ/ ಗೆಳೆತಿ ಎಂದು ನಿಮ್ಮ ಖಾಸಗಿ ಬದುಕಿನ ಬಗ್ಗೆ ಅಪ್ಪಿ ತಪ್ಪಿ ಕೂಡ ಅವರ ಬಳಿ ಹೇಳಬೇಡಿ. ಕೆಲವೊಂದು ವಿಷಯಗಳು ರಹಸ್ಯವಾಗಿ ಇದ್ದರೆ ಚೆಂದ. ನಮ್ಮ ಎಲ್ಲಾ ವಿಷಯಗಳು ಇನ್ನೊಬ್ಬರಿಗೆ ಗೊತ್ತಾದರೆ ನೆಗೆಪಾಟಲಿಗೆ ಈಡಾಗುತ್ತೇವೆ.
ಇನ್ನು ನಾವಾಡುವ ಮಾತುಗಳನ್ನು ನಮ್ಮ ಮಕ್ಕಳು ಕೇಳಿ ಬೆಳೆಯುವುದರಿಂದ ಆದಷ್ಟು ಸಭ್ಯವಾಗಿ ಮಾತನಾಡುವುದು ಒಳ್ಳೆಯದು.