ಜಿಮ್ ವರ್ಕೌಟ್‌ ವೇಳೆ ಮಾಡುವ ಈ ತಪ್ಪುಗಳು ಸಾವಿಗೆ ಕಾರಣವಾಗಬಹುದು, ಇರಲಿ ಎಚ್ಚರ…!

ಜಿಮ್‌ನಲ್ಲಿ ವ್ಯಾಯಾಮ ಮಾಡುವುದು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ ಎಂಬುದರಲ್ಲಿ ಸಂದೇಹವಿಲ್ಲ. ಆದರೆ ಇದರಲ್ಲೂ ಅನುಕೂಲ ಅನಾನುಕೂಲ ಎರಡೂ ಇದೆ. ಜಿಮ್‌ನಲ್ಲಿ ವ್ಯಾಯಾಮವನ್ನು ಯಾವ ರೀತಿ ಮಾಡುತ್ತಿದ್ದೀರಿ ಎಂಬುದರ ಮೇಲೆ ಅದರ ಪ್ರಯೋಜನಗಳು ನಿರ್ಧಾರವಾಗುತ್ತವೆ. ಕೆಲವು ತಪ್ಪುಗಳನ್ನು ಪದೇ ಪದೇ ಪುನರಾವರ್ತಿಸುತ್ತಿದ್ದರೆ ಅದು ಹೃದಯವನ್ನು ದುರ್ಬಲಗೊಳಿಸುತ್ತದೆ. ಇದರಿಂದ ಹೃದಯಾಘಾತದ ಅಪಾಯ ಗಮನಾರ್ಹವಾಗಿ ಹೆಚ್ಚಾಗುತ್ತದೆ.

ಸಾಮರ್ಥ್ಯ ಮೀರಿದ ವ್ಯಾಯಾಮ

ಜಿಮ್‌ನಲ್ಲಿ ವ್ಯಾಯಾಮ ಮಾಡಿ ಹೆಚ್ಚು ಅನುಭವವಿಲ್ಲದೇ ಇರುವವರು, ಆರಂಭಿಕರು ಸಾಮರ್ಥ್ಯಕ್ಕಿಂತ ಹೆಚ್ಚು ಕಸರತ್ತು ಮಾಡಬಾರದು. ಅತಿಯಾದ ಭಾರ ಎತ್ತುವುದು ಅಥವಾ ಸಾಮರ್ಥ್ಯವನ್ನು ಮೀರಿ ಓಡುವುದರಿಂದ ಹೃದಯದ ಮೇಲೆ ಹಠಾತ್ ಒತ್ತಡ ಬೀಳುತ್ತದೆ. ಈ ಕಾರಣದಿಂದಾಗಿ ಹೃದಯ ಬಡಿತ ಮತ್ತು ರಕ್ತದೊತ್ತಡ ವೇಗವಾಗಿ ಹೆಚ್ಚಾಗಬಹುದು. ಇದು ಹೃದಯಾಘಾತ ಅಥವಾ ಪಾರ್ಶ್ವವಾಯು ಅಪಾಯವನ್ನು ಹೆಚ್ಚಿಸುತ್ತದೆ.

ವಾರ್ಮ್-ಅಪ್ ಮತ್ತು ಕೂಲ್-ಡೌನ್ ಮಾಡದೇ ಇರುವುದು

ಜಿಮ್‌ಗೆ ಹೋಗುವ ಆತುರದಲ್ಲಿ ಅನೇಕ ಜನರು ವಾರ್ಮ್-ಅಪ್ ಮತ್ತು ಕೂಲ್-ಡೌನ್ ಅನ್ನು ಬಿಟ್ಟುಬಿಡುತ್ತಾರೆ. ಇದು ದೊಡ್ಡ ತಪ್ಪು. ವಾರ್ಮ್‌ ಅಪ್‌ ವ್ಯಾಯಾಮ ನಮ್ಮ ಸ್ನಾಯುಗಳನ್ನು ವ್ಯಾಯಾಮಕ್ಕೆ ಸಿದ್ಧಪಡಿಸುತ್ತದೆ ಮತ್ತು ದೇಹದ ಉಷ್ಣತೆಯನ್ನು ಹೆಚ್ಚಿಸುತ್ತದೆ. ಕೂಲ್-ಡೌನ್, ನಮ್ಮ ಹೃದಯ ಬಡಿತವನ್ನು ಕ್ರಮೇಣ ಕಡಿಮೆ ಮಾಡಲು ಮತ್ತು ದೇಹವನ್ನು ಶಾಂತ ಸ್ಥಿತಿಗೆ ತರಲು ಸಹಾಯ ಮಾಡುತ್ತದೆ. ಎರಡೂ ವ್ಯಾಯಾಮಗಳು ಹೃದಯದ ಮೇಲಿನ ಒತ್ತಡವನ್ನು ಕಡಿಮೆ ಮಾಡುತ್ತವೆ. ಹಾಗಾಗಿ ಇವುಗಳನ್ನು ಕಡ್ಡಾಯವಾಗಿ ಮಾಡಬೇಕು.

ನೋವನ್ನು ನಿರ್ಲಕ್ಷಿಸುವುದು

ವ್ಯಾಯಾಮದ ಸಮಯದಲ್ಲಿ ಕೆಲವೊಮ್ಮೆ ಸ್ನಾಯುಗಳ ಒತ್ತಡ ಸಹಜ. ಆದರೆ ಎದೆ ನೋವು, ತಲೆತಿರುಗುವಿಕೆ ಅಥವಾ ಉಸಿರಾಟದ ತೊಂದರೆಯನ್ನು ಅನುಭವಿಸುತ್ತಿದ್ದರೆ ತಕ್ಷಣವೇ ಎಚ್ಚೆತ್ತುಕೊಳ್ಳಿ. ವ್ಯಾಯಾಮವನ್ನು ನಿಲ್ಲಿಸಿ. ನೋವನ್ನು ನಿರ್ಲಕ್ಷಿಸುವುದು ಮತ್ತು ವ್ಯಾಯಾಮವನ್ನು ಮುಂದುವರಿಸುವುದು ಹೃದಯಕ್ಕೆ ಅಪಾಯಕಾರಿ. ತಕ್ಷಣವೇ ವ್ಯಾಯಾಮವನ್ನು ನಿಲ್ಲಿಸಿ, ವಿಶ್ರಾಂತಿ ತೆಗೆದುಕೊಳ್ಳಬೇಕು. ಅಗತ್ಯವಿದ್ದರೆ ವೈದ್ಯರನ್ನು ಸಂಪರ್ಕಿಸಿ.

ಡಿಹೈಡ್ರೇಶನ್‌

ವ್ಯಾಯಾಮದ ಸಮಯದಲ್ಲಿ ಬೆವರುವುದು ಸಹಜ. ಬೆವರಿನ ಜೊತೆಗೆ ದೇಹದಿಂದ ನೀರು ಕೂಡ ಹೊರಬರುತ್ತದೆ. ಸಾಕಷ್ಟು ದ್ರವ ಪದಾರ್ಥವನ್ನು ಸೇವನೆ ಮಾಡದೇ ಇದ್ದರೆ ಡಿಹೈಡ್ರೇಶನ್‌ ಆಗಬಹುದು. ನಿರ್ಜಲೀಕರಣವು ರಕ್ತ ಪರಿಚಲನೆಯನ್ನು ನಿಧಾನಗೊಳಿಸುತ್ತದೆ, ಇದರಿಂದಾಗಿ ಹೃದಯವು ರಕ್ತವನ್ನು ಪಂಪ್ ಮಾಡಲು ಹೆಚ್ಚು ಕೆಲಸ ಮಾಡುತ್ತದೆ. ವ್ಯಾಯಾಮದ ಮೊದಲು, ವ್ಯಾಯಾಮದ ಸಮಯದಲ್ಲಿ ಮತ್ತು ನಂತರ ನೀರನ್ನು ಕುಡಿಯುವುದು ಬಹಳ ಮುಖ್ಯ.

ವೈದ್ಯಕೀಯ ಸ್ಥಿತಿ ಗಮನದಲ್ಲಿರಲಿ

ಈಗಾಗಲೇ ಯಾವುದೇ ಹೃದಯ ಸಂಬಂಧಿ ಕಾಯಿಲೆ ಹೊಂದಿದ್ದರೆ, ಜಿಮ್‌ಗೆ ಹೋಗುವ ಮೊದಲು ಖಂಡಿತವಾಗಿಯೂ ವೈದ್ಯರನ್ನು ಸಂಪರ್ಕಿಸಿ. ಯಾವ ರೀತಿಯ ವ್ಯಾಯಾಮ ಮಾಡಬಹುದು ಎಂಬುದನ್ನು ತಿಳಿದುಕೊಳ್ಳಿ. ಯಾವ ವ್ಯಾಯಾಮಗಳು ನಿಮಗೆ ಸುರಕ್ಷಿತ ಎಂಬುದನ್ನು ವೈದ್ಯರು ನಿಮಗೆ ತಿಳಿಸುತ್ತಾರೆ. ಕೆಲವು ಮುನ್ನೆಚ್ಚರಿಕೆಗಳನ್ನು ನೀಡಬಹುದು. ಹಾಗಾಗಿ ನಿಮ್ಮ ವೈದ್ಯಕೀಯ ಸ್ಥಿತಿಯನ್ನು ಮರೆಮಾಚಬೇಡಿ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read