ಹುಬ್ಬಳ್ಳಿ : ಜೈನಮುನಿ ಕಾಮಕುಮಾರನಂದಿ ಶ್ರೀಗಳನ್ನು ಅತಿ ಕ್ರೂರವಾಗಿ ಕೊಂದರೂ ಸಿಎಂ ಸಿದ್ದರಾಮಯ್ಯ ಯಾವುದೇ ಸ್ಪಂದನೆ ನೀಡಿಲ್ಲ ಎಂದು ಸಿಎಂ ಸಿದ್ದರಾಮಯ್ಯ ವಿರುದ್ಧ ಜೈನಮುನಿ ಗುಣಧರನಂದಿ ವಾಗ್ಧಾಳಿ ನಡೆಸಿದ್ದಾರೆ.
ಜೈನಮುನಿ ಕಾಮಕುಮಾರನಂದಿ ಶ್ರೀಗಳನ್ನು ಪೈಶಾಚಿಕವಾಗಿ ಹತ್ಯೆ ಮಾಡಲಾಗಿದೆ. ದೇಶದಲ್ಲಿ ಆತಂಕವಾದಿಗಳಿಗೆ ಯಾವ ಶಿಕ್ಷೆಯಾಗುವುದಿಲ್ಲವೋ ಅಂತಹ ಶಿಕ್ಷೆನೀಡಲಾಗಿದೆ. ಇಷ್ಟೊಂದು ಭೀಕರವಾಗಿ ಶ್ರೀಗಳನ್ನ ಕೊಂದರೂ ಸಿಎಂ ಯಾವುದೇ ಸ್ಪಂದನೆ ನೀಡುತ್ತಿಲ್ಲ. ಅಲ್ಪಸಂಖ್ಯಾತ , ಕುರುಬ ಸಮಾಜದ ಶ್ರೀಗಳಿಗೆ ಹೀಗಾಗಿದ್ದರೆ ಸುಮ್ಮನಿರುತ್ತಿದ್ದರಾ..? ಎಂದು ಪ್ರಶ್ನಿಸಿದ್ದಾರೆ.
ಜೈನಮುನಿ ಕಾಮಕುಮಾರನಂದಿ ಶ್ರೀಗಳ ಹತ್ಯೆಗೆ ವ್ಯಾಪಕ ಖಂಡನೆ ವ್ಯಕ್ತವಾಗಿದ್ದು, ಬೆಂಗಳೂರಿನಲ್ಲಿ ಜೈನ ಸಮುದಾಯದ ಮುಖಂಡರು , ಜೈನ ದಿಗಂಬರ ಮುನಿ ವೀರಸಾಗರ ಮಹಾರಾಜ್ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದರು. ಜಯನಗರದ ಜೈನ ಮಂದಿರದಿಂದ ಸೌತ್ ಎಂಡ್ ಸರ್ಕಲ್ ನ ಅಶೋಕ ಪಿಲ್ಲರ್ ವರೆಗೂ ಈ ವೇಳೆ ಸಾವಿರಾರು ಜೈನ ಸಮುದಾಯದವರು ಸಾವಿಗೆ ನ್ಯಾಯ ನೀಡುವಂತೆ ಆಗ್ರಹಿಸಿದರು.