ಮಧ್ಯಪ್ರದೇಶದಲ್ಲಿ ಬುಡಕಟ್ಟು ಜನಾಂಗದ ವ್ಯಕ್ತಿ ಮೇಲೆ ಮೂತ್ರವಿಸರ್ಜನೆ ಮಾಡಿದ ಪ್ರಕರಣ ದೇಶಾದ್ಯಂತ ಸದ್ದು ಮಾಡಿದ್ದು ಇದರ ನಡುವೆಯೇ ಮಧ್ಯಪ್ರದೇಶದ ಸಾಗರದಲ್ಲಿ ವ್ಯಕ್ತಿಯೊಬ್ಬನನ್ನ ಬೆತ್ತಲೆಗೊಳಿಸಿ ಥಳಿಸಲಾಗಿದೆ.
ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ವಿಡಿಯೋದಲ್ಲಿ ವ್ಯಕ್ತಿಯೊಬ್ಬನನ್ನ ಬೆತ್ತಲೆಗೊಳಿಸಿ ಗುಂಪೊಂದು ಪೈಪ್ ನಿಂದ ಕರುಣೆಯಿಲ್ಲದೆ ಥಳಿಸಿದೆ. ಆತನ ಮೇಲೆ ಕಳ್ಳತನದ ಆರೋಪ ಹೊರಿಸಿ ಕೈಗಳು ಸೇರಿದಂತೆ ದೇಹದ ಮೇಲೆ ಪೈಪ್ ನಿಂದ ಅಮಾನವೀಯವಾಗಿ ಹಲ್ಲೆ ಮಾಡಲಾಗಿದೆ. ಮಧ್ಯಪ್ರದೇಶದ ಸಾಗರ್ ನಗರ ಪೊಲೀಸರು ದುಷ್ಕರ್ಮಿಗಳ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
ವೈರಲ್ ವೀಡಿಯೊ ತಮ್ಮ ಗಮನಕ್ಕೆ ಬಂದಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಅಭಿಷೇಕ್ ತಿವಾರಿ ಖಚಿತಪಡಿಸಿದ್ದಾರೆ. ಮೋತಿನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿರುವ ಧರಮ್ ಕಾಂತಾ ಪ್ರದೇಶದಲ್ಲಿ ಇದನ್ನು ಚಿತ್ರೀಕರಿಸಲಾಗಿದೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ ಎಂದು ಹೇಳಿದ್ದಾರೆ.
ಪ್ರಕರಣ ಸಂಬಂಧ ಎಫ್‌ಐಆರ್ ದಾಖಲಾಗಿದ್ದು, ಹಲ್ಲೆಕೋರರನ್ನು ಪತ್ತೆ ಹಚ್ಚುವ ಪ್ರಯತ್ನ ನಡೆಯುತ್ತಿದೆ ಎಂದು ಮೋತಿನಗರ ಪೊಲೀಸ್ ಠಾಣೆ ಪ್ರಭಾರಿ ಮಾನಸ್ ದ್ವಿವೇದಿ ತಿಳಿಸಿದ್ದಾರೆ. ಶಂಕಿತರನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದ ನಂತರ ಘಟನೆಯ ಕುರಿತು ಹೆಚ್ಚಿನ ವಿವರಗಳನ್ನು ಬಹಿರಂಗಪಡಿಸಲಾಗುವುದು ಎಂದು ಅವರು ಹೇಳಿದರು.