ಆರೋಗ್ಯ ಸಚಿವಾಲಯದ ಅಡಿಯಲ್ಲಿ ನಿರ್ಮಿಸಲಾದ ವಿಶ್ವದ ಮೊದಲ ಪೋರ್ಟಬಲ್ ಆಸ್ಪತ್ರೆಯನ್ನು ಅಯೋಧ್ಯೆಗೆ ಕಳುಹಿಸಲಾಗುತ್ತಿದೆ. ಇದಕ್ಕೆ ʼಆರೋಗ್ಯ ಮೈತ್ರಿʼ ಎಂದು ಹೆಸರಿಡಲಾಗಿದೆ. ವಾಯುಪಡೆಯ ವೈದ್ಯರು ಮತ್ತು ಆರೋಗ್ಯ ಕಾರ್ಯಕರ್ತರು ಅಯೋಧ್ಯೆಯ ಎರಡು ಸ್ಥಳಗಳಲ್ಲಿ ಆಸ್ಪತ್ರೆಗಳನ್ನು ಸಿದ್ಧಪಡಿಸುತ್ತಾರೆ. ಲತಾ ಮಂಗೇಶ್ಕರ್ ಚೌಕ್ ಮತ್ತು ಟೆಂಟ್ ಸಿಟಿಯಲ್ಲಿ ಪುಟ್ಟ ಆಸ್ಪತ್ರೆ ತಲೆಯೆತ್ತುತ್ತಿದೆ.
ಈ ಮೇಡ್ ಇನ್ ಇಂಡಿಯಾ ಆಸ್ಪತ್ರೆಯನ್ನು ಕೇವಲ 8 ನಿಮಿಷಗಳಲ್ಲಿ ಜಗತ್ತಿನ ಯಾವ ಮೂಲೆಯಲ್ಲಿ ಬೇಕಾದರೂ ಸಿದ್ಧಪಡಿಸಬಹುದು. ಇದನ್ನು ಫೋಲ್ಡ್ ಮಾಡಿಡಬಹುದು. ಇವುಗಳನ್ನು ಭೂಮಿ, ಸಮುದ್ರ ಮತ್ತು ವಾಯು ಮಾರ್ಗಗಳ ಮೂಲಕ ಪ್ರಪಂಚದ ಯಾವುದೇ ಭಾಗಕ್ಕೆ ಸಾಗಿಸಬಹುದು.
ದುರಂತದ ಸಮಯದಲ್ಲಿ 200 ಜನರಿಗೆ ಈ ಪುಟ್ಟ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಬಹುದು. ಶಸ್ತ್ರಚಿಕಿತ್ಸೆ, ಬೆಂಕಿ ಅವಘಡ, ಯುದ್ಧ, ಪ್ರವಾಹ, ಭೂಕಂಪ ಇಂತಹ ಅನಾಹುತಗಳ ಸಮಯದಲ್ಲಿ ಈ ಆಸ್ಪತ್ರೆಗಳು ವರದಾನವಾಗಲಿವೆ.
ಈ ಆಸ್ಪತ್ರೆ ನಿರ್ಮಾಣದ ಜವಾಬ್ದಾರಿಯನ್ನು ಪ್ರಧಾನಿ ಮೋದಿ ವರ್ಷದ ಹಿಂದೆ ರಕ್ಷಣಾ ಸಚಿವಾಲಯ ಮತ್ತು ಆರೋಗ್ಯ ಸಚಿವಾಲಯಕ್ಕೆ ವಹಿಸಿದ್ದರು. ಶ್ರೀಲಂಕಾ ಮತ್ತು ಮ್ಯಾನ್ಮಾರ್‌ಗೆ ಭಾರತವು ಇದನ್ನು ಉಡುಗೊರೆಯಾಗಿ ನೀಡಿದೆ. ಈ ಆಸ್ಪತ್ರೆಯಲ್ಲಿ ಇರುವ ಮೂರು ಕ್ಯುಬಿಕಲ್‌ಗಳಲ್ಲಿ ಒಟ್ಟು 36 ಬಾಕ್ಸ್‌ಗಳಿವೆ.
ಆಸ್ಪತ್ರೆಗಳ ಬಗ್ಗೆ ಸಂಪೂರ್ಣ ಮಾಹಿತಿ ಭೀಷ್ಮ ಅಪ್ಲಿಕೇಶನ್‌ನಲ್ಲಿ ಲಭ್ಯವಿದೆ. ಇಲ್ಲಿ ನೀಡಿರುವ ಫೋನ್‌ಗಳು ಆಫ್‌ಲೈನಲ್ಲೂ ಕಾರ್ಯನಿರ್ವಹಿಸುತ್ತವೆ. ಈ ಮಾಹಿತಿಯನ್ನು 60 ಭಾಷೆಗಳಲ್ಲಿ ನೀಡಲಾಗಿದೆ. ಈ ಆಸ್ಪತ್ರೆಯು ತುಂಬಾ ಚಿಕ್ಕದಾಗಿರುವುದರಿಂದ ಇದನ್ನು ಏರ್ ಲಿಫ್ಟ್ ಮೂಲಕ ಎಲ್ಲಿ ಬೇಕಾದರೂ ತೆಗೆದುಕೊಂಡು ಹೋಗಬಹುದು. ಇದನ್ನು ಆಕಾಶದಿಂದ ನೆಲಕ್ಕೆ ಅಥವಾ ನೀರಿಗೆ ಎಸೆದರೂ ಅದು ಹಾನಿಗೊಳಗಾಗುವುದಿಲ್ಲ. ಇದರ ಒಟ್ಟು ತೂಕ 720 ಕೆ.ಜಿ. ಪ್ರತಿ ಬಾಕ್ಸ್‌ನಲ್ಲಿ ಕ್ಯೂಆರ್ ಕೋಡ್ ಇದ್ದು, ಯಾವ ಬಾಕ್ಸ್‌ನಲ್ಲಿ ಔಷಧಗಳಿವೆ ಮತ್ತು ಅವುಗಳ ಅವಧಿ ಏನಾಗಿದೆ ಎಂಬುದನ್ನು ಸ್ಕ್ಯಾನ್ ಮಾಡಬಹುದು.
ಈ ಆಸ್ಪತ್ರೆಯನ್ನು ಯುದ್ಧಭೂಮಿ ಅಥವಾ ದುರಂತದ ಸ್ಥಳಕ್ಕೆ ಕೊಂಡೊಯ್ಯುವ ಮೂಲಕ ಆಪರೇಷನ್ ಥಿಯೇಟರ್ ಅನ್ನು 8 ರಿಂದ 10 ನಿಮಿಷಗಳಲ್ಲಿ ಸಿದ್ಧಪಡಿಸಬಹುದು. ಸೌರಶಕ್ತಿ ಮತ್ತು ಬ್ಯಾಟರಿಗಳ ಸಹಾಯದಿಂದ ಈ ಆಸ್ಪತ್ರೆಯನ್ನು ಸಂಪೂರ್ಣವಾಗಿ ನಡೆಸಬಹುದು. ಈ ಆಸ್ಪತ್ರೆಯ ನಿರ್ಮಾಣಕ್ಕೆ ತಗುಲಿರುವ ವೆಚ್ಚ 2.5 ಕೋಟಿ ರೂಪಾಯಿ.