ಬೆಂಗಳೂರು : ‘ಕಮಲ’ ಉದುರಿ ಹೋಯ್ತು, ತೆನೆ ಹೊತ್ತ ಮಹಿಳೆ ‘ತೆನೆ’ ಎಸೆದು ಓಡಿ ಹೋದಳು ಎಂದು ಡಿಸಿಎಂ ಡಿಕೆ ಶಿವಕುಮಾರ್ ಕವನ ವಾಚನ ಮಾಡಿದರು.
ಯುವನಿಧಿ ಯೋಜನೆಗೆ ಚಾಲನೆ ನೀಡುವ ಕಾರ್ಯಕ್ರಮದಲ್ಲಿ ಮಾತನಾಡಿದ ಡಿಸಿಎಂ ಡಿಕೆ ಶಿವಕುಮಾರ್ ಬಿಜೆಪಿ ಹಾಗೂ ಜೆಡಿಎಸ್ ಕಾಲೆಳೆದರು.
‘ಐದು ಬೆರಳು ಸೇರಿ ಒಂದು ಮುಷ್ಟಿಯಾಯಿತು. ಐದು ಗ್ಯಾರಂಟಿ ಸೇರಿ ಕೈ ಗಟ್ಟಿಯಾಯಿತು. ಅರಳಿದ ಕಮಲದ ಹೂವು ಇದನ್ನು ನೋಡಿ ಉದುರಿ ಹೋಯಿತು.ಐದು ಗ್ಯಾರಂಟಿ ನೋಡಿ ಮಹಿಳೆ ತಾನು ಹೊತ್ತ ತೆನೆಯ ಎಸೆದು ಹೋದಳು. ಐದು ಗ್ಯಾರಂಟಿ ಸೇರಿ ಕೈ ಗಟ್ಟಿಯಾಯಿತು. ಕರ್ನಾಟಕ ಸಮೃದ್ಧವಾಯಿತು. ಕರ್ನಾಟಕ ಪ್ರಬುದ್ಧವಾಯಿತು ಎಂದು ಹೇಳಿದ್ದಾರೆ. ಸಮೃದ್ಧ ಕರ್ನಾಟಕಕ್ಕಾಗಿ, ರಾಜ್ಯದ ಭವ್ಯ ಭವಿಷ್ಯಕ್ಕಾಗಿ ನವ ಕರ್ನಾಟಕ ನಿರ್ಮಾಣಕ್ಕಾಗಿ, ಗೃಹಲಕ್ಷ್ಮಿ , ಶಕ್ತಿ ಯೋಜನೆ, ಯುವನಿಧಿ, ಗೃಹಜ್ಯೋತಿ, ಅನ್ನಭಾಗ್ಯ ಜಾರಿಯಾಗಿದೆ’ ಎಂದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿ ರಾಜ್ಯ ಸರ್ಕಾರದ ಐತಿಹಾಸಿಕ “ಯುವನಿಧಿ” ಯೋಜನೆಯ ನೋಂದಣಿ ಪ್ರಕ್ರಿಯೆಯ ಚಾಲನಾ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಕಾರ್ಯಕ್ರಮದ ಅಧ್ಯಕ್ಷರು ಹಾಗೂ ಶಾಸಕರಾದ ರಿಜ್ವಾನ್ ಅರ್ಷದ್, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ಸಚಿವರಾದ ಶರಣಪ್ರಕಾಶ್ ಪಾಟೀಲ್, ಸಾರಿಗೆ ಸಚಿವ ರಾಮಲಿಂಗಾರೆಡ್ಡಿ, ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ, ಉನ್ನತ ಶಿಕ್ಷಣ ಸಚಿವ ಎಂ.ಸಿ.ಸುಧಾಕರ್, ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವ ನಾಗೇಂದ್ರ, ರಾಜ್ಯ ಯೋಜನಾ ಆಯೋಗದ ಉಪಾಧ್ಯಕ್ಷ ಶ್ರೀ ರಾಜೀವ್ ಗೌಡ, ಪರಿಷತ್ ಸದಸ್ಯ ಯು.ಬಿ.ವೆಂಕಟೇಶ್, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಗೋವಿಂದರಾಜು, ನಸೀರ್ ಅಹ್ಮದ್ ಸೇರಿದಂತೆ ಇತರೆ ಗಣ್ಯರು ಹಾಜರಿದ್ದರು.