ಭಾರತದಲ್ಲಿ ಅನೇಕರು ಬ್ಲಾಕ್ ಟೀ ಕುಡಿಯುವ ಅಭ್ಯಾಸ ಹೊಂದಿದ್ದಾರೆ. ನೀರು ಬಿಟ್ಟರೆ ಅತಿ ಹೆಚ್ಚು ಸೇವಿಸುವ ಪಾನೀಯ ಇದು. ಬೆಳಗ್ಗೆಯಿಂದ ಸಂಜೆಯವರೆಗೆ ಅನೇಕ ಕಪ್ ಚಹಾವನ್ನು ಗುಟುಕರಿಸುವವರೂ ಇದ್ದಾರೆ. ಹೆಚ್ಚು ಹಾಲು ಮತ್ತು ಸಕ್ಕರೆಯೊಂದಿಗೆ ಚಹಾ ಕುಡಿಯುವುದು ಮಧುಮೇಹ ಮತ್ತು ಮಲಬದ್ಧತೆಯ ಅಪಾಯವನ್ನು ಹೆಚ್ಚಿಸುತ್ತದೆ. ಹಾಗಾಗಿ ಅನೇಕರು ಬ್ಲಾಕ್ ಟೀಯನ್ನು ಆರೋಗ್ಯಕರ ಆಯ್ಕೆಯಾಗಿ ಆಯ್ದುಕೊಳ್ತಾರೆ. ಆದರೆ ಬ್ಲಾಕ್ ಟೀ ಆರೋಗ್ಯಕ್ಕೆ ಸುರಕ್ಷಿತವೇ ಎಂಬುದು ಎಷ್ಟೋ ಮಂದಿಗೆ ತಿಳಿದಿಲ್ಲ.
ಬ್ಲಾಕ್ ಟೀ ಮತ್ತು ನಿಂಬೆ ಸಂಯೋಜನೆ
ಬ್ಲಾಕ್ ಟೀಗೆ ನಿಂಬೆ ರಸ ಬೆರೆಸಿ ಕುಡಿಯುವ ಅಭ್ಯಾಸ ಅನೇಕರಿಗೆ ಇರಬಹುದು. ನಿಂಬೆ ವಿಟಮಿನ್ ಸಿ ಯ ಸಮೃದ್ಧ ಮೂಲವೆಂದು ಪರಿಗಣಿಸಲಾಗಿದೆ. ಕೋವಿಡ್ ಸಮಯದಲ್ಲಿ ಜನರು ರೋಗನಿರೋಧಕ ಶಕ್ತಿಗಾಗಿ ನಿಂಬೆರಸ ಬೆರೆಸಿದ ಕಷಾಯವನ್ನು ಕುಡಿಯಲು ಸಲಹೆ ನೀಡಲಾಗಿತ್ತು.
ಮುಂಬೈ ನಿವಾಸಿಯೊಬ್ಬರಿಗೆ ಇದ್ದಕ್ಕಿದ್ದಂತೆ ಕಾಲುಗಳಲ್ಲಿ ಊತ ಕಾಣಿಸಿಕೊಂಡಿತ್ತು. ವಾಂತಿಯ ಜೊತೆಗೆ ಹಸಿವಿನ ನಷ್ಟವೂ ಆಗಿತ್ತು. ಪರೀಕ್ಷಿಸಿದಾಗ ಆತನ ಕಿಡ್ನಿ ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ ಎಂದು ತಿಳಿದುಬಂದಿದೆ. ಈ ವ್ಯಕ್ತಿ ಬ್ಲಾಕ್ ಟೀಗೆ ನಿಂಬೆರಸ ಬೆರೆಸಿ ಕುಡಿಯುವ ಅಭ್ಯಾಸ ಹೊಂದಿದ್ದರು. ನಿಂಬೆ ಮತ್ತು ಬ್ಲಾಕ್ ಟೀ ಕಾಂಬಿನೇಷನ್ ಕಿಡ್ನಿಗೆ ಮಾರಕವಾಗಬಹುದು.
ನಿಂಬೆರಸ ಬೆರೆಸಿದ ಬ್ಲಾಕ್ ಟೀಯನ್ನು ಮಿತವಾಗಿ ಕುಡಿಯಬಹುದು. ಹೆಚ್ಚಿನ ಪ್ರಮಾಣದಲ್ಲಿ ಅದು ಆರೋಗ್ಯಕ್ಕೆ ಹಾನಿಕಾರಕ ಎನ್ನುತ್ತಾರೆ ವೈದ್ಯರು. ವಿಟಮಿನ್ ಸಿ ಸೇವನೆಯು ಹೆಚ್ಚಾದರೆ ದೇಹದಲ್ಲಿ ಆಕ್ಸಲೇಟ್ ಪ್ರಮಾಣವು ಹೆಚ್ಚಾಗುತ್ತದೆ. ಇದು ಮೂತ್ರಪಿಂಡದ ಸೋಂಕಿಗೆ ಕಾರಣವಾಗಬಹುದು ಮತ್ತು ಮೂತ್ರಪಿಂಡ ವೈಫಲ್ಯಕ್ಕೂ ಕಾರಣವಾಗಬಹುದು.