ಟೆಕ್ಸಾಸ್: ಕಳೆದ ವರ್ಷ ಧಾರ್ಮಿಕ ಸಮಾರಂಭವೊಂದರಲ್ಲಿ ತನ್ನ 11 ವರ್ಷದ ಮಗನ ಭುಜದ ಮೇಲೆ ಬಿಸಿ ಕಬ್ಬಿಣದ ರಾಡ್ ನಿಂದ ಮುದ್ರೆ ಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಭಾರತೀಯ ಮೂಲದ ವ್ಯಕ್ತಿಯೊಬ್ಬರು 1 ಮಿಲಿಯನ್ ಡಾಲರ್ ಪರಿಹಾರ ಕೋರಿದ್ದಾರೆ.
US ನಲ್ಲಿನ ಹಿಂದೂ ದೇವಾಲಯ ಮತ್ತು ಅದರ ಮಾತೃಸಂಸ್ಥೆಯ ವಿರುದ್ಧ 1 ಮಿಲಿಯನ್ ಡಾಲರ್ ನಷ್ಟು ಹಾನಿಯನ್ನು ಕೋರಿ ಮೊಕದ್ದಮೆ ಹೂಡಿದ್ದಾರೆ. 11 ವರ್ಷದ ಬಾಲಕನ ಭುಜದ ಮೇಲೆ ಹಿಂದೂ ದೇವರಾದ ವಿಷ್ಣುವಿನ ಆಕಾರದಲ್ಲಿ ಬಿಸಿ ರಾಡ್ ನಿಂದ ಮುದ್ರೆ ಹಾಕಲಾಗಿದೆ.
ಆಗಸ್ಟ್ ನಲ್ಲಿ ಟೆಕ್ಸಾಸ್ ನ ಶುಗರ್ ಲ್ಯಾಂಡ್ ನಲ್ಲಿರುವ ಶ್ರೀ ಅಷ್ಟಲಕ್ಷ್ಮಿ ಹಿಂದೂ ದೇವಾಲಯದಲ್ಲಿ ಘಟನೆ ನಡೆದಿದ್ದು, ಇದರಿಂದ ಬಾಲಕನಿಗೆ ತೀವ್ರ ನೋವು ಮತ್ತು ಶಾಶ್ವತ ವಿಕಾರ ಉಂಡಾಗಿದೆ ಎಂದು ದೂರಲಾಗಿದೆ.
ಟೆಕ್ಸಾಸ್ ನ ಫೋರ್ಟ್ ಬೆಂಡ್ ಕೌಂಟಿಯಲ್ಲಿ ನೆಲೆಸಿರುವ ವಿಜಯ್ ಚೆರುವು ಅವರು ಪತ್ರಿಕಾಗೋಷ್ಠಿಯಲ್ಲಿ ಘಟನೆಯ ಕುರಿತು ಮಾತನಾಡಿ, ತಮ್ಮ ಮಗನ ಯೋಗಕ್ಷೇಮದ ಬಗ್ಗೆ ಆಘಾತ ಮತ್ತು ಕಳವಳ ವ್ಯಕ್ತಪಡಿಸಿದ್ದಾರೆ.
ಶ್ರೀ ಅಷ್ಟಲಕ್ಷ್ಮಿ ದೇವಸ್ಥಾನದ ಸಮಾರಂಭದಲ್ಲಿ, ಮೂರು ಮಕ್ಕಳು ಸೇರಿದಂತೆ 100 ಕ್ಕೂ ಹೆಚ್ಚು ಮಂದಿ ಭಾಗವಹಿಸಿದ್ದರು, ಅವರಲ್ಲಿ ಒಬ್ಬರು ಚೆರುವು ಅವರ ಮಗ ಕೂಡ ಒಬ್ಬನಾಗಿದೆ. ಹುಡುಗನ ಇಚ್ಛೆಗೆ ವಿರುದ್ಧವಾಗಿ ತಂದೆ ಒಪ್ಪಿಗೆ ಇಲ್ಲದೇ ಕಾದ ಕಬ್ಬಿಣದ ರಾಡ್ ನಿಂದ ಮುದ್ರೆ ಹಾಕಲಾಗಿದೆ. ಚೆರುವು ಅವರ ಮಾಜಿ ಪತ್ನಿಯೊಂದಿಗೆ ಬಾಲಕ ದೇವಾಲಯಕ್ಕೆ ಹೋಗಿದ್ದಾಗ ಘಟನೆ ನಡೆದಿದೆ.
ಚೆರುವು ವಕೀಲರಾದ ಬ್ರ್ಯಾಂಡ್ ಸ್ಟೋಗ್ನರ್, ಪೋಷಕರು ಒಪ್ಪಿದರೂ ಸಹ ಟೆಕ್ಸಾಸ್‌ನಲ್ಲಿ ಮಗುವಿಗೆ ಮುದ್ರೆ, ಹಚ್ಚೆ ಅಥವಾ ಗುರುತು ಹಾಕುವುದು ಕಾನೂನಿಗೆ ವಿರುದ್ಧವಾಗಿದೆ ಎಂದು ಹೇಳಿದ್ದಾರೆ.