ಬೆಂಗಳೂರು: ಬಿಜೆಪಿ ಕಾರ್ಯಕರ್ತರ ವಿರುದ್ಧ ಕಾಂಗ್ರೆಸ್ ಸರ್ಕಾರ ಸುಳ್ಳು ಕೇಸ್ ಜೊತೆಗೆ ಕಾನೂನಾತ್ಮಕ ದೌರ್ಜನ್ಯ ನಡೆಸುವ ಸಾಧ್ಯತೆ ಇದೆ ಎಂದು ಸಂಸದ ತೇಜಸ್ವಿ ಸೂರ್ಯ ಆರೋಪಿಸಿದ್ದಾರೆ.
ಇಂತಹ ದೌರ್ಜನ್ಯದ ವಿರುದ್ಧ ಬಿಜೆಪಿ ಕಾರ್ಯಕರ್ತರು ಸಮರ್ಥವಾಗಿ ಎದುರಿಸಲು ವಾರದೊಳಗೆ ಸಹಾಯವಾಣಿ ಆರಂಭಿಸಲಾಗುವುದು. ರಾಜ್ಯ ಬಿಜೆಪಿ ಕಾನೂನು ಪ್ರಕೋಷ್ಟದಿಂದ ವಕೀಲರ ಸಭೆ ನಡೆಸಿದ್ದು, ಇದಕ್ಕೆ ಪೂರಕವಾಗಿ ಸಹಾಯವಾಣಿ ಸೇವೆ ಒದಗಿಸಲಾಗುವುದು ಎಂದರು.
ಕಾಂಗ್ರೆಸ್ ಸರ್ಕಾರದ ಎಲ್ಲಾ ಕಾನೂನಾತ್ಮಕ ದೌರ್ಜನ್ಯ ತಡೆಗೆ ಕಾನೂನು ಪ್ರಕೋಷ್ಟದಿಂದ ಸಹಾಯವಾಣಿ ಆರಂಭಿಸಲಿದ್ದು, ದಿನದ 24 ಗಂಟೆಯೂ ಕಾರ್ಯನಿರ್ವಹಿಸಲಿದೆ ಎಂದು ತೇಜಸ್ವಿ ಸೂರ್ಯ ತಿಳಿಸಿದ್ದಾರೆ.
ಪಕ್ಷದ ಕಾರ್ಯಕರ್ತರ ಮೇಲೆ ಸುಳ್ಳು ಕೇಸ್ ದಾಖಲು, ಸುಳ್ಳು ಆರೋಪ ಹೊರಿಸಿ ಪೊಲೀಸ್ ವ್ಯವಸ್ಥೆ ದುರ್ಬಳಕೆ, ಅಭಿವ್ಯಕ್ತಿ ಸ್ವಾತಂತ್ರ್ಯ ಹತ್ತಿಕ್ಕುವ ಪ್ರಯತ್ನ, ಕಾನೂನಾತ್ಮಕ ದೌರ್ಜನ್ಯ ನಡೆಸುವ ಸಾಧ್ಯತೆ ಇದ್ದು, ಇಂತಹ ಸಂದರ್ಭದಲ್ಲಿ ಸಹಾಯವಾಣಿಗೆ ಕರೆ ಮಾಡಿ ನೆರವು ಪಡೆಯಬಹುದಾಗಿದೆ. ರಾಜ್ಯದಲ್ಲೆಡೆ ಇರುವ ನಮ್ಮ ವಕೀಲರ ತಂಡ ಕಾರ್ಯಕರ್ತರ ನೆರವಿಗೆ ದಾವಿಸಲಿದೆ ಎಂದು ತಿಳಿಸಿದ್ದಾರೆ.