ಚೆನ್ನೈ: ಪ್ರಿಯಕರ ವಂಚಿಸಿದನೆಂಬ ಕಾರಣಕ್ಕೆ ಆತನ ಮೇಲೆ ಪ್ರಿಯತಮೆ ಕುದಿಯುವ ಎಣ್ಣೆಯನ್ನು ಸುರಿದಿರುವ ಘಟನೆ ತಮಿಳುನಾಡಿನ ಈರೋಡ್‌ನಲ್ಲಿ ನಡೆದಿದೆ. 27 ವರ್ಷದ ಕಾರ್ತಿ ಭವಾನಿ ವರ್ಣಪುರಂ ನಿವಾಸಿಯಾಗಿದ್ದು, ಅವರಿಗೆ ಗಂಭೀರ ಗಾಯಗಳಾಗಿವೆ. ಯುವತಿಯನ್ನು ಪೊಲೀಸರು ಬಂಧಿಸಿದ್ದಾರೆ.
ಕಾರ್ತಿ ಭವಾನಿ ಪೆರುಂದುರೈನ ಖಾಸಗಿ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ಇವರು ತಮ್ಮ ಸಂಬಂಧಿಕರೊಬ್ಬರಾದ ಮೀನಾ ದೇವಿಯೊಂದಿಗೆ ಸಂಬಂಧ ಹೊಂದಿದ್ದರು. ಆಕೆಯನ್ನು ಮದುವೆಯಾಗುವುದಾಗಿ ಭರವಸೆ ನೀಡಿದ್ದರು. ಆದರೆ ಈಗ ಬೇರೊಬ್ಬಳ ಜೊತೆ ನಿಶ್ಚಿತಾರ್ಥ ಮಾಡಿಕೊಳ್ಳಲಿರುವ ಸುದ್ದಿ ತಿಳಿಯುತ್ತಿದ್ದಂತೆಯೇ ಪ್ರಿಯತಮೆ ಈ ಕೃತ್ಯ ಎಸಗಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.
ನಿಶ್ಚಿತಾರ್ಥಕ್ಕೆ ಸಂಬಂಧಿಸಿದಂತೆ ಇಬ್ಬರ ನಡುವೆ ಆಗಾಗ್ಗೆ ಜಗಳ ನಡೆಯುತ್ತಿತ್ತು. ವಾಗ್ವಾದಗಳು ಉಲ್ಬಣಗೊಂಡ ಪರಿಣಾಮ ದೇವಿಯು ಕಾರ್ತಿಯ ಮೇಲೆ ಕುದಿಯುವ ಎಣ್ಣೆಯನ್ನು ಸುರಿದಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.