ಕಾಲಮಿತಿಯೊಳಗೆ ಶೌಚಾಲಯ ನಿರ್ಮಾಣಕ್ಕೆ ಅನುದಾನ ಬಳಕೆ ಮಾಡದ 318 ಪಿಡಿಒ ಅಮಾನತು ಮಾಡಲು ಗ್ರಾಮೀಣ ಕುಡಿಯುವ ನೀರು ಮತ್ತು ಸರಬರಾಜು ಇಲಾಖೆ ಸೂಚನೆ ನೀಡಿದೆ.
ಸ್ವಚ್ಛ ಭಾರತ ಮಿಷನ್ ಯೋಜನೆಯಡಿ ವೈಯಕ್ತಿಕ ಶೌಚಾಲಯ ನಿರ್ಮಾಣಕ್ಕೆ ಸಿಟಿಜನ್ ಪೋರ್ಟಲ್ ಮೂಲಕ ಸಲ್ಲಿಕೆಯಾದ ಬೇಡಿಕೆಗಳ ಆಧಾರದಲ್ಲಿ ಪ್ರತಿ ಪಂಚಾಯಿತಿವಾರು ಪಟ್ಟಿಗಳನ್ನು ಸಿದ್ಧಪಡಿಸಲಾಗಿದೆ. 4.85 ಲಕ್ಷ ಶೌಚಾಲಯ ನಿರ್ಮಾಣಕ್ಕೆ ಬೇಡಿಕೆ ಬಂದಿದ್ದು, 3.60 ಲಕ್ಷ ಶೌಚಾಲಯಗಳಿಗೆ ಅನುದಾನ ಬಿಡುಗಡೆ ಮಾಡಲಾಗಿತ್ತು.
ಈ ಅನುದಾನವನ್ನು ನಿಗದಿತ ಅವಧಿ ಒಳಗೆ ಖರ್ಚು ಮಾಡದ ಪಿಡಿಒಗಳನ್ನು ಅಮಾನತು ಮಾಡಲು ತಕ್ಷಣ ಕ್ರಮ ಕೈಗೊಳ್ಳುವಂತೆ 30 ಜಿಲ್ಲೆಗಳ ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಿಗೆ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಪತ್ರ ಬರೆದಿದೆ. ಗ್ರಾಮೀಣ ಭಾಗದ ಮನೆಗಳಲ್ಲಿ ಶೌಚಾಲಯ ನಿರ್ಮಾಣಕ್ಕೆ ಕೇಂದ್ರ ಸರ್ಕಾರ 7200 ರೂ., ರಾಜ್ಯ ಸರ್ಕಾರ 4800 ಸೇರಿ 12,000 ರೂ. ಸಹಾಯಧನ ನೀಡುತ್ತವೆ. ಪರಿಶಿಷ್ಟ ಜಾತಿ, ಪಂಗಡದ ಕುಟುಂಬಗಳಿಗೆ 15,000 ರೂ. ಸಹಾಯಧನ ನೀಡಲಾಗುವುದು.
318 ಪಂಚಾಯಿತಿಗಳಲ್ಲಿ ಆಗಸ್ಟ್ ಅಂತ್ಯದವರೆಗೆ ಒಂದು ಶೌಚಾಲಯವನ್ನು ನಿರ್ಮಿಸದೆ ಅನುದಾನವನ್ನು ಹಾಗೆಯೇ ಉಳಿಸಿಕೊಂಡಿದ್ದ ಹಿನ್ನೆಲೆಯಲ್ಲಿ ಕ್ರಮಕ್ಕೆ ಸೂಚನೆ ನೀಡಲಾಗಿದೆ.