
ಶಿವಮೊಗ್ಗ: ಸರ್ಕಾರಿ ಜಾಗ ಒತ್ತುವರಿ ತೆರವಿಗೆ ಹೋಗಿದ್ದ ಅಧಿಕಾರಿಗಳಿಗೆ ಬೆದರಿಕೆ ಹಾಕಲಾಗಿದೆ. ತಹಶೀಲ್ದಾರ್ ಮತ್ತು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಜೀವ ಬೆದರಿಕೆ ಹಾಕಿ ಕರ್ತವ್ಯಕ್ಕೆ ಅಡ್ಡಿಪಡಿಸಿದ ಹಿನ್ನೆಲೆಯಲ್ಲಿ ಸಾಗರ ಗ್ರಾಮಾಂತರ ಠಾಣೆಯಲ್ಲಿ 7 ಮಂದಿ ವಿರುದ್ಧ ಪ್ರಕರಣ ದಾಖಲಾಗಿದೆ.
ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕಿನ ಕಸಬಾ ಹೋಬಳಿ ಮಡಸೂರು ಗ್ರಾಮದ ಸರ್ವೆ ನಂಬರ್ 71ರ ಸರ್ಕಾರಿ ಜಮೀನಿನಲ್ಲಿ ಒತ್ತುವರಿ ಮಾಡಲಾಗಿದ್ದು, ತಹಶೀಲ್ದಾರ್ ಮಲ್ಲೇಶ ಪೂಜಾರ್ ನೇತೃತ್ವದ ಕಂದಾಯ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿಗಳ ತಂಡ ಸ್ಥಳಕ್ಕೆ ಭೇಟಿ ನೀಡಿದೆ. ಸ್ಥಳದಲ್ಲಿ ಬೀಟೆ, ನಂದಿ ಮೊದಲಾದ ಮರಗಳನ್ನು ಕಡಿತಲೆ ಮಾಡಿರುವುದು ಗಮನಕ್ಕೆ ಬಂದಿದ್ದು, ತಹಶೀಲ್ದಾರ್ ವಲಯ ಅರಣ್ಯಾಧಿಕಾರಿ ಅರವಿಂದ್ ಅವರನ್ನು ಸ್ಥಳಕ್ಕೆ ಕರೆಸಿಕೊಂಡು ಜಂಟಿ ಸರ್ವೆ ನಡೆಸಲಾಗಿದೆ.
ಗ್ರಾಮಸ್ಥರು ಸರ್ಕಾರಿ ಜಮೀನು ಒತ್ತುವರಿಯಾಗದಂತೆ ಟ್ರಂಚ್ ತೆಗೆಯಲು ಹೇಳಿದ್ದಾರೆ. ಈ ವೇಳೆ ಟಂಚ್ ತೆಗೆಯಲು ಬಂದ ಜೆಸಿಬಿ ಚಾಲಕರಿಗೆ ಒತ್ತುವರಿದಾರರು ಬೆದರಿಕೆ ಹಾಕಿ ವಾಪಸ್ ಕಳುಹಿಸಿದ್ದಾರೆ. ಅಧಿಕಾರಿಗಳ ಸಮ್ಮುಖದಲ್ಲಿ ಟ್ರಂಚ್ ತೆಗೆಯಲು ಮುಂದಾದಾಗ ಸರ್ಕಾರಿ ಕೆಲಸಕ್ಕೆ ಅಡ್ಡಿ ಉಂಟು ಮಾಡಿ ಸ್ಥಳದಿಂದ ತೆರಳಲು ಬೆದರಿಸಿದ್ದಾರೆ. ಕತ್ತಿ, ದೊಣ್ಣೆ, ಮಚ್ಚುಗಳಿಂದ ಒತ್ತುವರಿದಾರರು ಅಧಿಕಾರಿಗಳಿಗೆ ಬೆದರಿಕೆ ಹಾಕಿ ಜೆಸಿಬಿ ಬೀಗ ಕಸಿದುಕೊಂಡಿದ್ದಾರೆ.
ಸಾಗರ ಗ್ರಾಮಾಂತರ ಠಾಣೆಗೆ 7 ಜನರ ವಿರುದ್ಧ ದೂರು ನೀಡಲಾಗಿದೆ. ಹುಚ್ಚಪ್ಪ, ಆನಂದ, ಗಂಗಾಧರ, ದೇವರಾಜ, ವೀರೇಂದ್ರ ಸೇರಿದಂತೆ 7 ಮಂದಿಯನ್ನು ಬಂಧಿಸಿ ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ.