ನವದೆಹಲಿ: ಗಣಿ ತೆರಿಗೆ ಸಂಗ್ರಹ ಅಧಿಕಾರ ಕೇಂದ್ರ ಸರ್ಕಾರಕ್ಕೆ ಇಲ್ಲ, ರಾಜ್ಯಗಳಿಗೆ ಮಾತ್ರ ಇದೆ ಎಂದು ಸುಪ್ರೀಂ ಕೋರ್ಟ್ 9 ಸದಸ್ಯ ಸಂವಿಧಾನ ಪೀಠದಿಂದ ಮಹತ್ವದ ಐತಿಹಾಸಿಕ ತೀರ್ಪು ಪ್ರಕಟಿಸಲಾಗಿದೆ.
ರಾಜ್ಯಗಳು ಖನಿಜಗಳು ಮತ್ತು ತೆರಿಗೆ ಖನಿಜ ಭೂಮಿ ಮೇಲೆ ರಾಯಧನವನ್ನು ತೆಗೆದುಕೊಳ್ಳಬಹುದು ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಇದರಿಂದಾಗಿ ಕೇಂದ್ರ ಸರ್ಕಾರಕ್ಕೆ ಭಾರಿ ಹಿನ್ನಡೆಯಾಗಿದ್ದು, ಖನಿಜ ಸಂಪತ್ತು ಹೊಂದಿದ ರಾಜ್ಯಗಳ ಆದಾಯದಲ್ಲಿ ಭಾರಿ ಏರಿಕೆ ಆಗುವ ಸಾಧ್ಯತೆ ಇದೆ.
ಖನಿಜಗಳ ಮೇಲಿನ ರಾಯಲ್ಟಿ ತೆರಿಗೆ ಅಲ್ಲ. ಗಣಿಗಳು ಹಾಗೂ ಖನಿಜವನ್ನು ಹೊಂದಿರುವ ಭೂಮಿಗಳ ಮೇಲೆ ತೆರಿಗೆ ಹೇರುವ ಶಾಸನಾತ್ಮಕ ಅಧಿಕಾರವನ್ನು ರಾಜ್ಯಗಳು ಮಾತ್ರ ಹೊಂದಿವೆ ಎಂದು ಸುಪ್ರೀಂಕೋರ್ಟ್ 8:1 ಬಹುಮತದ ಐತಿಹಾಸಿಕ ತೀರ್ಪು ನೀಡಿದೆ. 9 ಸದಸ್ಯ ಬರೆದ ಸಾಂವಿಧಾನಿಕ ಪೀಠದ ಈ ತೀರ್ಪಿನಿಂದಾಗಿ ಕೇಂದ್ರ ಸರ್ಕಾರಕ್ಕೆ ಭಾರಿ ಹಿನ್ನಡೆಯಾಗಿದೆ.
ಕೇಂದ್ರ ಸರ್ಕಾರಕ್ಕೆ ಪ್ರತಿ ವರ್ಷ ಸಾವಿರಾರು ಕೋಟಿ ಖನಿಜ ತೆರಿಗೆ ನಷ್ಟವಾಗಲಿದೆ. ರಾಜ್ಯಗಳಿಗೆ ಇಷ್ಟು ವರ್ಷ ನಷ್ಟವಾಗುತ್ತಿದ್ದ ಸಾವಿರಾರು ಕೋಟಿ ರೂ. ಖನಿಜ ತೆರಿಗೆ ಲಾಭ ತರಲಿದೆ. ಜಿ.ಎಸ್.ಟಿ.ಯಿಂದ ಹೊರಗಿರುವ ಪೆಟ್ರೋಲ್, ಡೀಸೆಲ್ ಮೇಲಿನ ತೆರಿಗೆ, ಅಬಕಾರಿ ತೆರಿಗೆ, ನೋಂದಣಿ ಮತ್ತು ಮುದ್ರಾಂಕ ಶುಲ್ಕ, ವಾಹನ ನೋಂದಣಿ ಶುಲ್ಕದ ಜೊತೆಗೆ ರಾಜ್ಯಗಳಿಗೆ ಇನ್ನೊಂದು ದೊಡ್ಡ ಆದಾಯ ಮೂಲ ಸಿಕ್ಕಂತಾಗಿದೆ.
ಈ ತೀರ್ಪಿನಿಂದಾಗಿ ಜಾರ್ಖಂಡ್ ಹಾಗೂ ಒಡಿಶಾ ಸೇರಿದಂತೆ ಖನಿಜ ಸಂಪತ್ತು ಹೊಂದಿದ ರಾಜ್ಯಗಳಿಗೆ ಭಾರಿ ಆದಾಯದ ನಿರೀಕ್ಷೆ ಇದೆ. ಇದುವರೆಗೂ ಕೇಂದ್ರ ಸರ್ಕಾರ ಗಣಿ ಮತ್ತು ಖನಿಜಗಳ ಮೇಲೆ ವಿಧಿಸಿದ ಸಾವಿರಾರು ಕೋಟಿ ಹಣವನ್ನು ವಸೂಲಿ ಮಾಡಿ ತಮಗೆ ಹಂಚಿಕೆ ಮಾಡಬೇಕು ಎಂದು ಜಾರ್ಖಂಡ್, ಒಡಿಶಾ ರಾಜ್ಯಗಳು ನ್ಯಾಯಾಲಯಕ್ಕೆ ಮನವಿ ಮಾಡಿದ್ದು, ಇನ್ನು ಮುಂದೆ ಈ ತೀರ್ಪು ಜಾರಿಗೆ ಬರುವಂತೆ ಆದೇಶಿಸಲು ಕೇಂದ್ರ ಸರ್ಕಾರ ಹೇಳಿದೆ. ಲಿಖಿತ ಹೇಳಿಕೆ ಸಲ್ಲಿಸಿದರೆ ಜುಲೈ 31 ರಂದು ನಿರ್ಧಾರ ಕೈಗೊಳ್ಳುವುದಾಗಿ ನ್ಯಾಯಾಲಯ ತಿಳಿಸಿದೆ.