ತುಮಕೂರು: ಸಚಿವ ಕೆ.ಎನ್. ರಾಜಣ್ಣ ಪುತ್ರ, ಕಾಂಗ್ರೆಸ್ ವಿಧಾನ ಪರಿಷತ್ ಸದಸ್ಯ ರಾಜೇಂದ್ರ ಹತ್ಯೆಗೆ ಸುಪಾರಿ ಪ್ರಕರಣಕ್ಕೆ ಸಂಬಂಧಿಸಿದಂತೆ ಕ್ಯಾತ್ಸಂದ್ರ ಪೊಲೀಸರ ಮುಂದೆ ಆರೋಪಿ ಸೋಮ ಶರಣಾಗಿದ್ದಾನೆ.
ತಾನಾಗಿಯೇ ಬಂದು ತುಮಕೂರಿನ ಕ್ಯಾತ್ಸಂದ್ರ ಪೊಲೀಸರ ಮುಂದೆ ಸೋಮ ಶರಣಾಗಿದ್ದಾನೆ. ಪೊಲೀಸರು ರೌಡಿಶೀಟರ್ ಸೋಮನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.
ಸೋಮನ ವಿರುದ್ಧ ಸುಪಾರಿ ಪಡೆದ ಆರೋಪ ಕೇಳಿಬಂದಿದ್ದು, ಈಗಾಗಲೇ ರಾಜೇಂದ್ರ ಹತ್ಯೆಗೆ 5 ಲಕ್ಷ ರೂಪಾಯಿ ಮುಂಗಡ ಪಡೆದುಕೊಂಡಿದ್ದಾನೆ ಎಂದು ಹೇಳಲಾಗಿತ್ತು. ಇದೀಗೆ ತಾನಾಗೇ ಶರಣಾದ ರೌಡಿಶೀಟರ್ ಸೋಮನನ್ನು ಪೊಲೀಸರು ವಿಚಾರಣೆಗೆ ಒಳಪಡಿಸಿದ್ದಾರೆ.
ನನ್ನ ಕೊಲೆಗೆ ಸಂಚು ರೂಪಿಸಿದ್ದು, ತನಿಖೆ ನಡೆಸಿ ಅಗತ್ಯ ಕ್ರಮ ಕೈಗೊಳ್ಳಬೇಕೆಂದು ವಿಧಾನ ಪರಿಷತ್ ಸದಸ್ಯ ಆರ್. ರಾಜೇಂದ್ರ ನೀಡಿದ ದೂರಿನ ಮೇರೆಗೆ ಸೋಮ, ಭರತ್, ಅಮಿತ್, ಗುಂಡ, ಯತೀಶ್ ಸೇರಿ ಇತರರ ವಿರುದ್ಧ ಕ್ಯಾತ್ಸಂದ್ರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ತಲೆಮರೆಸಿಕೊಂಡಿದ್ದ ಎ 1 ಆರೋಪಿ ಸೋಮ ತಾನಾಗಿಯೇ ಪೊಲೀಸರ ಮುಂದೆ ಶರಣಾಗಿದ್ದಾನೆ. ಈಗಾಗಲೇ ಪೊಲೀಸರು ಭರತ್, ಯತೀಶ್ ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ರಾಜೇಂದ್ರ ಕೊಲೆಗೆ ಸಂಚು ರೂಪಿಸಿದ ಬಗ್ಗೆ ಪುಷ್ಪಾ ಮತ್ತು ರಾಕಿ ಎಂಬುವರ ಮಧ್ಯೆ ನಡೆದ ಸಂಭಾಷಣೆಯ ಆಡಿಯೋ ಹರಿದಾಡಿತ್ತು.