ಬೆಂಗಳೂರು: ಮಾಜಿ ಮುಖ್ಯಮಂತ್ರಿ, ಕೇಂದ್ರದ ಮಾಜಿ ಸಚಿವ ಡಿ.ವಿ. ಸದಾನಂದ ಗೌಡ ಅವರು ಚುನಾವಣೆ ರಾಜಕೀಯದಿಂದ ದೂರ ಇರುವುದಾಗಿ ಹೇಳಿದ್ದಾರೆ.
ಮಾಜಿ ಸಚಿವ ಹಾಗೂ ಬಿಜೆಪಿ ಸಂಸದ ವಿ. ಶ್ರೀನಿವಾಸ ಪ್ರಸಾದ್ ಕೂಡ ರಾಜಕೀಯ ನಿವೃತ್ತಿ ಘೋಷಿಸಲು ಮುಂದಾಗಿದ್ದಾರೆ. ಮಾರ್ಚ್ 17ರಂದು ಶ್ರೀನಿವಾಸ ಪ್ರಸಾದ್ ಅವರ ಚುನಾವಣಾ ರಾಜಕೀಯಕ್ಕೆ 50 ವರ್ಷವಾಗಲಿದ್ದು, ಅದೇ ದಿನ ಬೃಹತ್ ಕಾರ್ಯಕ್ರಮ ನಡೆಸಿ ರಾಜಕೀಯ ನಿವೃತ್ತಿ ಘೋಷಿಸುತ್ತೇನೆ ಎಂದು ತಿಳಿಸಿದ್ದಾರೆ.
ಮುಂದೆ ಎಂದಿಗೂ ರಾಜಕೀಯ ಚಟುವಟಿಕೆಗಳಲ್ಲಿ ಭಾಗವಹಿಸುವುದಿಲ್ಲ ಎಂದು ಚಾಮರಾಜನಗರ ಸಂಸದರಾದ ಶ್ರೀನಿವಾಸ ಪ್ರಸಾದ್ ಹೇಳಿದ್ದಾರೆ. ಮೈಸೂರಿನಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಾ. 17 ರಂದು ರಾಜಕೀಯ ನಿವೃತ್ತಿ ಘೋಷಿಸಲಿದ್ದು, ಮುಂದಿನ ದಿನಗಳಲ್ಲಿ ಯಾವುದೇ ಪಕ್ಷದ ಪರವಾಗಿ ಪ್ರಚಾರ ಮಾಡುವುದಿಲ್ಲ. ಸಲಹೆ ಸೂಚನೆಗಳನ್ನು ನೀಡುವುದಿಲ್ಲ. ಎಲ್ಲ ರಾಜಕೀಯ ಚಟುವಟಿಕೆಗಳಿಂದ ಸಂಪೂರ್ಣ ದೂರ ಇರುತ್ತೇನೆ ಎಂದು ಘೋಷಣೆ ಮಾಡುವುದಾಗಿ ತಿಳಿಸಿದ್ದಾರೆ.