ಬಿಹಾರದ ಸಲೂನ್ ವೊಂದರಲ್ಲಿ ಆನ್ ಲೈನ್ ಮೂಲಕ 50 ರೂಪಾಯಿ ಹಣ ಪಾವತಿಸಿದ ಯುಪಿಐ ಐಡಿಯಿಂದ ಅತ್ಯಾಚಾರದ ಆರೋಪ ಹೊತ್ತ ವ್ಯಕ್ತಿಯನ್ನು ಹಿಡಿಯಲು ಮುಂಬೈ ಪೊಲೀಸರಿಗೆ ಸಹಾಯವಾದ ಕ್ರೈಂ ಕಥೆಯಿದು.
ಅತ್ಯಾಚಾರದ ಆರೋಪ ಹೊತ್ತ 26 ವರ್ಷದ ವ್ಯಕ್ತಿ ಮುಂಬೈನಿಂದ ಪಲಾಯನವಾದ ಕೆಲವು ದಿನಗಳ ನಂತರ ಪೊಲೀಸರು ಪತ್ತೆಹಚ್ಚಿದ್ದು ಬಿಹಾರದಲ್ಲಿ ಆತನ ಸಹೋದರಿಯ ಮನೆಯಲ್ಲಿ ಸಿಕ್ಕಿಬಿದ್ದಿದ್ದಾನೆ.
ಮೇ 8 ರಂದು 25 ವರ್ಷದ ಮಹಿಳೆಯೊಬ್ಬರು ದಕ್ಷಿಣ ಮುಂಬೈ ಪೊಲೀಸ್ ಠಾಣೆಯನ್ನು ಸಂಪರ್ಕಿಸಿ ಸಾಮಾಜಿಕ ಮಾಧ್ಯಮದ ಮೂಲಕ ಪರಿಚಯವಾದ ವ್ಯಕ್ತಿಯೊಬ್ಬ ಮದುವೆಯಾಗುವ ನೆಪದಲ್ಲಿ ತನ್ನ ಮೇಲೆ ಅತ್ಯಾಚಾರವೆಸಗಿದ್ದಾನೆ ಮತ್ತು ಗರ್ಭಪಾತಕ್ಕೆ ಒಳಗಾಗುವಂತೆ ಒತ್ತಾಯಿಸಿದ್ದಾರೆ ಎಂದು ಪೊಲೀಸರಿಗೆ ದೂರು ನೀಡಿದ್ದರು. ಪುರುಷನ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 376 (ಅತ್ಯಾಚಾರ), 313 (ಮಹಿಳೆಯ ಒಪ್ಪಿಗೆಯಿಲ್ಲದೆ ಗರ್ಭಪಾತಕ್ಕೆ ಕಾರಣ), 417 (ವಂಚನೆಗೆ ಶಿಕ್ಷೆ) ಮತ್ತು 506 (2) (ಕ್ರಿಮಿನಲ್ ಬೆದರಿಕೆ) ಅಡಿಯಲ್ಲಿ ಪ್ರಕರಣವನ್ನು ದಾಖಲಿಸಲಾಯಿತು.
ಪ್ರಕರಣ ದಾಖಲಾದ ಕೂಡಲೇ ಆರೋಪಿ ಮುಂಬೈನಿಂದ ಪಲಾಯನ ಮಾಡಿದ್ದ. ಆತನ ಫೋನ್ ಸ್ವಿಚ್ ಆಫ್ ಆಗಿದ್ದರಿಂದ ಪೊಲೀಸರಿಗೆ ಆತನ ಸ್ಥಳವನ್ನು ಪತ್ತೆಹಚ್ಚಲು ಸಾಧ್ಯವಾಗಲಿಲ್ಲ.
ಶಂಕಿತನ ಸ್ಥಳದ ಬಗ್ಗೆ ಸುಳಿವು ಇಲ್ಲದ ಪೊಲೀಸರು ಆತನ ಕರೆ ವಿವರಗಳ ದಾಖಲೆಗಳನ್ನು ಪಡೆದರು ಮತ್ತು ಅವನ ಸಂಬಂಧಿಕರು ಮತ್ತು ಅವರ ಸ್ಥಳಗಳನ್ನು ಗುರುತಿಸಲು ಪ್ರಾರಂಭಿಸಿದರು. ಆ ವ್ಯಕ್ತಿ ಬಿಹಾರ ಮೂಲದವನಾಗಿದ್ದು, ಆತನ ಸಹೋದರಿ ದರ್ಭಾಂಗಾದಲ್ಲಿ ನೆಲೆಸಿದ್ದಾಳೆ ಎಂದು ಪೊಲೀಸರಿಗೆ ತಿಳಿದುಬಂತು. ಆತನ ಗ್ರಾಮ ಗಡಿ ಸಮೀಪದಲ್ಲಿದ್ದು ನೇಪಾಳಕ್ಕೆ ಪರಾರಿಯಾಗಿರಬಹುದೆಂಬ ಶಂಕೆಯೂ ಪೊಲೀಸರಲ್ಲಿತ್ತು. ಪ್ರಕರಣದ ತನಿಖೆಗಾಗಿ ಮೇ 11 ರಂದು ಪೊಲೀಸ್ ತಂಡ ದರ್ಭಾಂಗಕ್ಕೆ ತೆರಳಿತು.
ತಂಡವು ಆರಂಭದಲ್ಲಿ ಟೆಲಿಕಾಂನಲ್ಲಿ ನೋಂದಾಯಿಸಿದಂತೆ ಅವರ ಸಹೋದರಿಯ ವಿಳಾಸಕ್ಕೆ ತೆರಳಿದರೂ ಮನೆಯಲ್ಲಿ ಶಂಕಿತ ವ್ಯಕ್ತಿ ಇರುವ ಬಗ್ಗೆ ಖಚಿತವಾಗದ ಕಾರಣ ಅವರು ಒಳಗೆ ಹೋಗಲಿಲ್ಲ. ಮೇ 12 ರಂದು ಪೊಲೀಸ್ ತಂಡವು ದರ್ಭಾಂಗಾದಲ್ಲಿರುವ ಆರೋಪಿಯ ಸೋದರಿ ಮನೆಯ ಹೊರಗೆ ಕಾದು ಕುಳಿತಿದ್ದಾಗ, ಮುಂಬೈನಲ್ಲಿ ಕಾನ್‌ಸ್ಟೆಬಲ್ ಒಬ್ಬರಿಗೆ ಶಂಕಿತನ ಖಾತೆಯನ್ನು ಹೊಂದಿರುವ ಬ್ಯಾಂಕ್‌ಗೆ ಹೋಗಿ ಬ್ಯಾಂಕ್ ಸ್ಟೇಟ್ ಮೆಂಟ್ ಪಡೆಯಲು ಸೂಚಿಸಲಾಯಿತು. ಬ್ಯಾಂಕ್ ಸ್ಟೇಟ್ ಮೆಂಟ್ ನಲ್ಲಿ ಆರೋಪಿ ದರ್ಭಾಂಗಾದ ಸ್ಥಳೀಯ ಸಲೂನ್‌ನಲ್ಲಿ 50 ರೂ. ಪಾವತಿಸಿದ್ದಾನೆಂಬುದು ಖಚಿತವಾಯಿತು.
ಸಲೂನ್‌ನ ಯುಪಿಐ ಐಡಿ ನೀಡಿದ ತಕ್ಷಣ ಡಿಜಿಟಲ್ ಪಾವತಿ ಕಂಪನಿಯಿಂದ ಅವರ ಹೆಸರು ಮತ್ತು ಸಂಖ್ಯೆಯನ್ನು ಪಡೆದುಕೊಂಡ ಪೊಲೀಸರು ಕ್ಷೌರಿಕರನ್ನು ಸಂಪರ್ಕಿಸಿದರು. ಆಗ ಆತನ ಅಂಗಡಿ ಶಂಕಿತನ ಸಹೋದರಿಯ ಮನೆಯಿಂದ 50 ಮೀಟರ್ ದೂರದಲ್ಲಿದೆ ಎಂದು ಪೊಲೀಸರಿಗೆ ತಿಳಿದುಬಂತು. ಪೊಲೀಸರು ಕ್ಷೌರಿಕನಿಗೆ ಆರೋಪಿಯ ಫೋಟೋ ತೋರಿಸಿ ದೃಢೀಕರಣ ಸಿಗ್ತಿದ್ದಂತೆ ಅವರು ಅದೇ ರಾತ್ರಿ ಮನೆಗೆ ಹೋಗಿ ಆರೋಪಿಯನ್ನು ಬಂಧಿಸಿದರು. ಆರೋಪಿಯನ್ನು ಮುಂಬೈಗೆ ಕರೆತರಲಾಗಿದ್ದು ಅಲ್ಲಿ ಆತ ಅಪರಾಧವನ್ನು ಒಪ್ಪಿಕೊಂಡಿದ್ದಾನೆ. ಈಗ ಆರೋಪಿ ಜೈಲಿನಲ್ಲಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.