ಬೆಂಗಳೂರು: ಭೀಕರ ಬರಗಾಲದಿಂದ ರಾಜ್ಯದ ಜನರು ಕಂಗೆಟ್ಟಿದ್ದು, ರೈತರು-ಜಾನುವಾರುಗಳು ಸಂಕಷ್ಟಕ್ಕೀಡಾಗಿವೆ. ಈ ಹಿನ್ನೆಲೆಯಲ್ಲಿ ಬರಪೀಡಿತ ಜಿಲ್ಲೆಗಳಿಗೆ ಭೇಟಿ ನೀಡಿ ಬರ ಪರಿಹಾರಕ್ಕೆ ಕೈಗೊಂಡಿರುವ ಕ್ರಮಗಳ ಬಗ್ಗೆ ವರದಿ ನೀಡುವಂತೆ ಸಿಎಂ ಸಿದ್ದರಾಮಯ್ಯ ಜಿಲ್ಲಾ ಉಸ್ತುವಾರಿ ಸಚಿವರುಗಳಿಗೆ ಸೂಚನೆ ನೀಡಿದ್ದಾರೆ.
ರಾಜ್ಯದ 236 ತಾಲೂಕುಗಳ ಪೈಕಿ 216 ತಾಲ್ಲೂಕುಗಳನ್ನು ಬರಪೀಡಿತವೆಂದು ಘೋಷಿಸಲಾಗಿದೆ. ಜನ- ಜಾನುವಾರುಗಳಿಗೆ ಕುಡಿಯುವ ನೀರು, ಮೇವು ಕೃಷಿ-ಕೈಗಾರಿಕೆಗಳಿಗೆ ನೀರು, ಬೆಳೆಹಾನಿ, ಜನರ ಉದ್ಯೋಗದ ಸ್ಥಿತಿ ಬರ ಪರಿಹಾರ ವಿತರಣೆ ಮುಂತಾದ ಕಾರ್ಯಕ್ರಮಗಳನ್ನು ಕೈಗೊಳ್ಳುವ ಕುರಿತು ಈಗಾಗಲೇ ಸಚಿವ ಸಂಪುಟ ಸಭೆಗಳಲ್ಲಿ ಚರ್ಚಿಸಿ ಜಿಲ್ಲಾಧಿಕಾರಿಗಳು, ಜಿಲ್ಲಾ ಪಂಚಾಯತಿಗಳ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಿಗೂ ನಿರ್ದೇಶನಗಳನ್ನು ನೀಡಲಾಗಿದೆ. ಆ ನಿಟ್ಟಿನಲ್ಲಿ ಜಿಲ್ಲಾ ಉಸ್ತುವಾರಿ ಸಚಿವರುಗಳು ಮುಂದಿನ ಎರಡು ವಾರಗಳಲ್ಲಿ ತಮ್ಮ ಉಸ್ತುವಾರಿ ಜಿಲ್ಲೆಯ ಪ್ರತಿ ತಾಲ್ಲೂಕುಗಳಿಗೆ ಭೇಟಿ ನೀಡಿ, ಪರಿಶೀಲನೆ ನಡೆಸಬೇಕು. ಸಂಬಂಧಪಟ್ಟ ಅಧಿಕಾರಿಗಳಿಗೆ ಯಾವುದೇ ವೈಫಲ್ಯಗಳಾಗದಂತೆ ಸೂಚಿಸಬೇಕು ಎಂದು ತಾಕೀತು ಮಾಡಿದ್ದಾರೆ.
ಬರ ನಿರ್ವಹಣೆ ಕುರಿತು ಯಾವೆಲ್ಲ ರೀತಿಯ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂಬ ಬಗ್ಗೆ ಪ್ರತಿ ತಾಲ್ಲೂಕುಗಳಲ್ಲಿ ಮಾಧ್ಯಮಗಳಿಗೆ ವಿವರಿಸಬೇಕು. ಅಲ್ಲದೇ ನವೆಂಬರ್ 15ರೊಳಗೆ ವರದಿ ನೀಡಬೇಕು ಎಂದು ಸಿಎಂ ಸೂಚಿಸಿದ್ದಾರೆ.