ಪಶ್ಚಿಮ ಬಂಗಾಳದ ಕೊಲ್ಕತ್ತಾದಲ್ಲಿ ಯುವ ವೈದ್ಯೆ ಅತ್ಯಾಚಾರ ಹಾಗೂ ಕೊಲೆ ಪ್ರಕರಣ ದೇಶದಾದ್ಯಂತ ತೀವ್ರ ಆಕ್ರೋಶಕ್ಕೆ ಕಾರಣವಾಗಿದ್ದು, ಆರೋಪಿಗಳಿಗೆ ಅತಿ ಶೀಘ್ರದಲ್ಲೇ ಗಲ್ಲು ಶಿಕ್ಷೆ ವಿಧಿಸುವಂತೆ ಒತ್ತಾಯ ಕೇಳಿ ಬರುತ್ತಿದೆ. ಪಶ್ಚಿಮ ಬಂಗಾಳದಲ್ಲಿ ವಿದ್ಯಾರ್ಥಿಗಳ ಪ್ರತಿಭಟನೆ ಮುಂದುವರೆದಿದ್ದು, ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರ ವಿರುದ್ಧ ಕಿಡಿ ಕಾರುತ್ತಿದ್ದಾರೆ. ಇದರ ಮಧ್ಯೆ ವಿದ್ಯಾರ್ಥಿಯೊಬ್ಬ ಸಾಮಾಜಿಕ ಜಾಲತಾಣದಲ್ಲಿ ಹಾಕಿರುವ ವಿವಾದಾತ್ಮಕ ಪೋಸ್ಟ್ ಒಂದು ಆತನನ್ನು ಬಂಧನಕ್ಕೀಡು ಮಾಡುವಂತೆ ಮಾಡಿದೆ.
ಕೊಲ್ಕತ್ತಾದ ಕಾಲೇಜ್ ಒಂದರಲ್ಲಿ ದ್ವಿತೀಯ ಬಿಕಾಂ ವ್ಯಾಸಂಗ ಮಾಡುತ್ತಿರುವ ಕೀರ್ತಿ ಶರ್ಮಾ ಎಂಬ ಯುವಕ ಸಾಮಾಜಿಕ ಜಾಲತಾಣ instagram ನಲ್ಲಿ ‘ಕೀರ್ತಿ ಸೋಶಿಯಲ್’ ಎಂಬ ತನ್ನ ಅಧಿಕೃತ ಖಾತೆ ಮೂಲಕ ಪೋಸ್ಟ್ ಹಾಕಿದ್ದು, ಇದರಲ್ಲಿ ಇಂದಿರಾಗಾಂಧಿಯವರಂತೆ ಮಮತಾ ಬ್ಯಾನರ್ಜಿಗೆ ಗುಂಡಿಕ್ಕಿ ಎಂದು ಬರೆದಿರುವುದು ವಿವಾದಕ್ಕೆ ಕಾರಣವಾಗಿದೆ. ಅಲ್ಲದೆ ಈತ ಅತ್ಯಾಚಾರ ಹಾಗೂ ಕೊಲೆಗೀಡಾದ ಯುವತಿಯ ಫೋಟೋ ಹಾಗೂ ಹೆಸರನ್ನು ಸಾಮಾಜಿಕ ಜಾಲತಾಣದಲ್ಲಿ ಬಹಿರಂಗಪಡಿಸಿದ್ದು, ಪೊಲೀಸರು ಈಗ ಆತನನ್ನು ಬಂಧಿಸಿದ್ದಾರೆ.
ಕೀರ್ತಿ ಶರ್ಮಾ ಅವರ ಪೋಸ್ಟ್ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ ಇದು ಟಿಎಂಸಿ ಕಾರ್ಯಕರ್ತರ ಕೆಂಗಣ್ಣಿಗೆ ಗುರಿಯಾಯಿತು. ಈ ಪೋಸ್ಟ್ ಮೂಲಕ ಕೀರ್ತಿ ಶರ್ಮಾ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರ ಹತ್ಯೆಗೆ ಪ್ರಚೋದನೆ ನೀಡಿದ್ದಾನೆ ಎಂದು ಆರೋಪಿಸಲಾಗಿದ್ದು, ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಕೀರ್ತಿ ಶರ್ಮಾನನ್ನು ಬಂಧಿಸಿದ್ದಾರೆ. ಯುವ ವೈದ್ಯೆ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಬಳಿಕ ಸೋಶಿಯಲ್ ಮೀಡಿಯಾ ಪೋಸ್ಟ್ ಗಳ ಮೇಲೆ ಹದ್ದಿನ ಕಣ್ಣಿಟ್ಟಿರುವ ಪಶ್ಚಿಮ ಬಂಗಾಳ ಪೊಲೀಸರು ಪ್ರಚೋದನಾಕಾರಿ ಪೋಸ್ಟ್ ಬರೆದವರ ವಿರುದ್ಧ ಕೇಸ್ ದಾಖಲು ಮಾಡುತ್ತಿದ್ದಾರೆ.