ಹಾಸನ: ಹಾಸನ ಜಿಲ್ಲೆಯ ಅರಸೀಕೆರೆಯಲ್ಲಿ ತಾಲೂಕು ಆಡಳಿತ ವತಿಯಿಂದ ನಡೆದ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಶಾಲಾ ಮಕ್ಕಳು ಕಮಲದ ಹೂವು ಹಿಡಿದು ನೃತ್ಯ ಮಾಡಿದ್ದಕ್ಕೆ ಶಾಸಕ ಶಿವಲಿಂಗೇಗೌಡ ವಿರೋಧ ವ್ಯಕ್ತಪಡಿಸಿದ್ದು, ಕಮಲದ ಹೂವು ಪಕ್ಷದ ಸಂಕೇತ ಎಂದು ಶಿಕ್ಷಕಿಯೊಂದಿಗೆ ವಾಗ್ವಾದ ನಡೆಸಿದ್ದಾರೆ.
ಗಣರಾಜ್ಯೋತ್ಸವ ಧ್ವಜಾರೋಹಣದ ನಂತರ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಚಂದ್ರಶೇಖರ ಭಾರತಿ ಶಾಲೆಯ ಮಕ್ಕಳು ರಾಷ್ಟ್ರ ಪಕ್ಷಿ ನವಿಲು, ರಾಷ್ಟ್ರ ಹೂ ಕಮಲ ಹಿಡಿದು ನೃತ್ಯ ಮಾಡಿದ್ದಾರೆ. ಕಮಲದ ಹೂ ಗಮನಿಸಿದ ಕಾಂಗ್ರೆಸ್ ಶಾಸಕ ಶಿವಲಿಂಗೇಗೌಡ ಹೂವು ಪಕ್ಷದ ಸಂಕೇತ ಎಂದು ಶಿಕ್ಷಕಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಕಮಲದ ಹೂವು ಅಶೋಕ ಚಕ್ರದಂತೆಯೇ ರಾಷ್ಟ್ರೀಯ ಸಂಕೇತವಾಗಿದೆ. ಹಾಗಾಗಿ ಅದನ್ನು ಬಳಸಿದ್ದೇವೆ. ರಿಹರ್ಸಲ್ ಸಂದರ್ಭದಲ್ಲಿ ಗಮನಿಸಿ ಅಧಿಕಾರಿಗಳು ಇದನ್ನು ಹೇಳಬಹುದಿತ್ತು ಎಂದು ಶಿಕ್ಷಕಿ ಶಾಸಕರಿಗೆ ಹೇಳಿದ್ದಾರೆ. ಸಮರ್ಥನೆ ಮಾಡಿಕೊಳ್ಳಬೇಡಿ, ಮಕ್ಕಳಿಗೆ ಇದನ್ನೇ ಕಲಿಸುತ್ತೀರಾ? ಕಮಲದ ಹೂವು ಒಂದು ಪಕ್ಷದ ಚಿಹ್ನೆ. ಹಾಗಾಗಿ ಬಳಸಬಾರದು ಎಂದು ಶಿವಲಿಂಗೇಗೌಡರು ಹೇಳಿದ್ದು ನೋಟಿಸ್ ಕೊಡುವುದಾಗಿ ಎಚ್ಚರಿಕೆ ನೀಡಿದ್ದಾರೆ.