ಬೆಂಗಳೂರು: ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಶಕ್ತಿ ಯೋಜನೆ ಬಗ್ಗೆ ಡಿಸಿಎಂ ಡಿ.ಕೆ.ಶಿವಕುಮಾರ್ ನೀಡಿದ್ದ ಹೇಳಿಕೆ ಭಾರಿ ಚರ್ಚೆಗೆ ಗ್ರಾಸವಾಗಿತ್ತು. ಇದರ ಬೆನ್ನಲ್ಲೇ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮಧ್ಯ ಪ್ರವೇಶ ಮಾಡಿ ಗೊಂದಲಗಳಿಗೆ ಅಂತ್ಯ ಹಾಡಿದ್ದರು. ಬಳಿಕ ಡಿಸಿಎಂ ತಮ್ಮ ಹೇಳಿಕೆಗೆ ಸಮಜಾಯಿಷಿ ನೀಡಿ ಶಕ್ತಿ ಯೋಜನೆ ಮಾತ್ರವಲ್ಲ ಯಾವ ಗ್ಯಾರಂಟಿ ಯೋಜನೆಗಳನ್ನೂ ನಿಲ್ಲಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದರು. ಇದರ ಬೆನ್ನಲ್ಲೇ ಇದೀಗ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಮತ್ತೆ ಚರ್ಚೆಯನ್ನು ಹುಟ್ಟುಹಾಕಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ರಾಮಲಿಂಗಾರೆಡ್ಡಿ, ಉಚಿತ ಬಸ್ ಪ್ರಯಾಣ ಶಕ್ತಿ ಯೋಜನೆಯನ್ನು ನಡೆಸುವುದು ಸಾರಿಗೆ ಇಲಾಖೆಗೆ ಸ್ವಲ್ಪ ಕಷ್ಟವಾಗುತ್ತಿದೆ. ಆದರೆ ಯೋಜನೆಯನ್ನು ಯಾವುದೇ ಕಾರಣಕ್ಕೂ ನಿಲ್ಲಿಸಲ್ಲ ಎಂದು ತಿಳಿಸಿದ್ದಾರೆ.
ಶಕ್ತಿ ಯೋಜನೆಯನ್ನು ನಿಲ್ಲಿಸುವುದಿಲ್ಲ. ಮುಂದುವರೆಸುತ್ತೇವೆ. ಅನ್ನಭಾಗ್ಯ ಯೋಜನೆ ಅಡಿ ನೇರ ನಗದು ವರ್ಗಾವಣೆ ಬಿಪಿಎಲ್ ಕಾರ್ಡ್ ಇದ್ದವರಿಗೆ ಮಾತ್ರ ಅನ್ವಯವಾಗುತ್ತದೆ. ಆದರೆ ಶಕ್ತಿ ಯೋಜನೆ ಹಾಗಲ್ಲ. ಎಲ್ಲ ಮಹಿಳೆಯರಿಗೂ ಅನುಕೂಲವಾಗುತ್ತದೆ. ಇದನ್ನು ನಡೆಸುವುದು ಇಲಾಖೆಗೆ ಸ್ವಲ್ಪ ಕಷ್ಟವಾಗುತ್ತಿದೆ. ಆದರೂ ಯೋಜನೆ ಸ್ಥಗಿತಗೊಳಿಸುವುದಿಲ್ಲ ಎಂದು ಸ್ಪಷ್ಟಪಡಿಸಿದರು.