ಬೆಂಗಳೂರು: ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ತತ್ತರಿಸಿದ ರಾಜ್ಯದ ಜನತೆಗೆ ಗಾಯದ ಮೇಲೆ ಬರೆ ಎಳೆದಂತೆ ಸರ್ಕಾರಿ ಆಸ್ಪತ್ರೆಗಳಲ್ಲಿ ಸೇವಾ ದರ ಹೆಚ್ಚಳದ ಬಿಸಿ ತಟ್ಟಿದೆ.
ಹೊರರೋಗಿಗಳ ಸೇವೆ, ಒಳ ರೋಗಿಗಳ ಸೇವೆ, ಪ್ರಯೋಗಾಲಯ ಪರೀಕ್ಷೆ ಸೇವೆಗಳ ಶುಲ್ಕವನ್ನು ಶೇಕಡ 15 ರಿಂದ 20 ರಷ್ಟು ಹೆಚ್ಚಳ ಮಾಡಲಾಗಿದ್ದು, ನವೆಂಬರ್ 1ರಿಂದಲೇ ಜಾರಿಗೆ ಬಂದಿದೆ.
ರಾಜ್ಯದ ವಿವಿಧೆಡೆಯಿಂದ ಹೆಚ್ಚಿನ ಚಿಕಿತ್ಸೆಗಾಗಿ ಸಾವಿರಾರು ಮಂದಿ ವಿಕ್ಟೋರಿಯಾ, ವಾಣಿವಿಲಾಸ, ಬೌರಿಂಗ್, ಲೇಡಿ ಕರ್ಜನ್, ಮಿಂಟೋ ಕಣ್ಣಿನ ಆಸ್ಪತ್ರೆಗಳಿಗೆ ಬರುತ್ತಾರೆ. ಈ ಆಸ್ಪತ್ರೆಗಳಲ್ಲಿ ಚಿಕಿತ್ಸಾ ವೆಚ್ಚ ಏರಿಕೆಯಾಗಿದೆ. ರಾಜ್ಯದಲ್ಲಿ ಲಕ್ಷಾಂತರ ಬಿಪಿಎಲ್ ಕಾರ್ಡ್ ರದ್ದಾಗಿದ್ದು, ಇದೇ ವೇಳೆ ಆಸ್ಪತ್ರೆಗಳಲ್ಲಿ ಸೇವಾ ಶುಲ್ಕ ಹೆಚ್ಚಳ ಮಾಡಿರುವುದು ಜನಸಾಮಾನ್ಯರಿಗೆ ತೊಂದರೆಯಾಗಿದೆ ಎಂದು ಹೇಳಲಾಗಿದೆ.
ಹೊರರೋಗಿಗಳ ಸೇವೆ ಶುಲ್ಕವನ್ನು 10 ರಿಂದ 20ರೂ.ಗೆ ಪರಿಷ್ಕರಿಸಲಾಗಿದೆ. ಒಳರೋಗಿಗಳ ದಾಖಲಾತಿ ಶುಲ್ಕವನ್ನು 25 ರೂ.ನಿಂದ 50 ರೂ.ಗೆ ಹೆಚ್ಚಳ ಮಾಡಲಾಗಿದೆ. ರಕ್ತಪರೀಕ್ಷಾ ಶುಲ್ಕವನ್ನು 70 ರೂ.ನಿಂದ 120 ರೂಪಾಯಿಗೆ ಹೆಚ್ಚಳ ಮಾಡಲಾಗಿದೆ. ವಾರ್ಡ್ ಶುಲ್ಕವನ್ನು 25 ರೂ.ನಿಂದ 50 ರೂ.ಗೆ, ತ್ಯಾಜ್ಯ ನಿರ್ವಹಣೆ ದರವನ್ನು 10 ರಿಂದ 50 ರೂ.ಗೆ ಹೆಚ್ಚಳ ಮಾಡಲಾಗಿದೆ.
ಆಸ್ಪತ್ರೆಗಳಲ್ಲಿ ಹೆಚ್ಚಳ ಮಾಡಿರುವ ಸೇವಾ ಶುಲ್ಕ ಅನ್ಯ ಕಾರ್ಯಗಳಿಗೆ ಬಳಸುವುದಿಲ್ಲ. ಆಯಾ ಆಸ್ಪತ್ರೆಗಳ ಅಭಿವೃದ್ಧಿಗೆ ಬಳಕೆ ಮಾಡಲಾಗುತ್ತದೆ. ಅನೇಕ ವರ್ಷಗಳ ನಂತರ ಸೇವಾ ಶುಲ್ಕ ಪರಿಷ್ಕರಿಸಲಾಗಿದೆ. ಅದು ಕೇವಲ ಶೇಕಡ 15 ರಿಂದ 20 ರಷ್ಟು ಮಾತ್ರ. ಈ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುವ ಶೇಕಡ 70ರಷ್ಟು ಮಂದಿ ಬಿಪಿಎಲ್ ಕಾರ್ಡ್ ದಾರರಾಗಿದ್ದು, ಅವರೆಲ್ಲರೂ ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ ಯೋಜನೆಯಡಿ ಉಚಿತ ಚಿಕಿತ್ಸೆ ಪಡೆಯುತ್ತಾರೆ. ಉಳಿದಂತೆ ಶೇಕಡ 30ರಷ್ಟು ಮಂದಿ ಮಾತ್ರ ಹಣ ಪಾವತಿಸಬೇಕಿದೆ. ಇದರಿಂದ ಬಡವರಿಗೆ ಯಾವುದೇ ತೊಂದರೆ ಇಲ್ಲವೆಂದು ಆಸ್ಪತ್ರೆಗಳು ಚಿಕಿತ್ಸಾದರ ಹೆಚ್ಚಳವನ್ನು ಸಮರ್ಥಿಸಿಕೊಂಡಿವೆ.