ಬೆಳಗಾವಿ(ಸುವರ್ಣಸೌಧ): ಮದ್ಯದ ಅಂಗಡಿಗಳ ಪರವಾನಿಗೆ ನೀಡುವಾಗ ಮೀಸಲಾತಿ ಪರಿಗಣಿಸಬೇಕೆಂಬ ಬೇಡಿಕೆ ಪರಿಶೀಲಿಸುವುದಾಗಿ ಅಬಕಾರಿ ಸಚಿವ ಆರ್.ಬಿ. ತಿಮ್ಮಾಪುರ ಹೇಳಿದ್ದಾರೆ.
ವಿಧಾನಸಭೆಯಲ್ಲಿ ಪ್ರಶ್ನೋತ್ತರ ಅವಧಿಯಲ್ಲಿ ಕಾಂಗ್ರೆಸ್ ಸದಸ್ಯ ಪಿ.ಎಂ. ನರೇಂದ್ರ ಸ್ವಾಮಿ ಅವರು ಸಿಎಲ್ 7, ಸಿಎಲ್ 9 ಸೇರಿ ಎಲ್ಲ ರೀತಿಯ ಮದ್ಯದ ಅಂಗಡಿ ಪರವಾನಿಗೆ ನೀಡುವಾಗ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡವರಿಗೆ ಮೀಸಲಾತಿ ನೀಡಬೇಕು. ಮೀಸಲಾತಿ ನಮ್ಮ ಹಕ್ಕಾಗಿದ್ದು, ಇದರಲ್ಲಿ ಆಗುತ್ತಿರುವ ಅನ್ಯಾಯ ಸರಿಪಡಿಸಬೇಕು ಎಂದು ಒತ್ತಾಯಿಸಿದ್ದಾರೆ.
ಈ ವೇಳೆ ಪ್ರತಿಕ್ರಿಯೆ ನೀಡಿದ ಸಚಿವರು, ಮದ್ಯದ ಅಂಗಡಿ ಪರವಾನಿಗೆ ನೀಡುವಾಗ ಮೀಸಲಾತಿ ಪಾಲಿಸಬೇಕೆಂಬ ನಿಯಮವಿಲ್ಲ. ಹೀಗಾಗಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಪರವಾನಿಗೆದಾರರಿಗೆ ಸೇರಿದ ಮದ್ಯದ ಅಂಗಡಿಗಳ ಸಂಖ್ಯೆ ಕಡಿಮೆ ಇದೆ. ಪರವಾನಿಗೆಯಲ್ಲಿ ಮೀಸಲಾತಿ ನೀಡಲು ಪರಿಶೀಲಿಸಲಾಗುವುದು ಎಂದು ತಿಳಿಸಿದ್ದಾರೆ.