ಬೆಂಗಳೂರು: ಶಾಲಾ ಮಕ್ಕಳ ಬ್ಯಾಗ್ ತೂಕ ಇಳಿಸುವ ನಿಟ್ಟಿನಲ್ಲಿ ಸರ್ಕಾರ ಕ್ರಮ ಕೈಗೊಂಡಿದ್ದು, ಪಠ್ಯಪುಸ್ತಕ ವಿಭಜಿಸಿ ಮುದ್ರಿಸಲು ನಿರ್ಧಾರ ಕೈಗೊಂಡಿದೆ.
ಶಾಲಾ ಬ್ಯಾಗ್ ತೂಕ ವೈಜ್ಞಾನಿಕವಾಗಿ ಕಡಿತ ಮಾಡುವ ನಿಟ್ಟಿನಲ್ಲಿ ಮುಂದಿನ ಶೈಕ್ಷಣಿಕ ವರ್ಷದಿಂದ ಒಂದರಿಂದ 10ನೇ ತರಗತಿ ವಿದ್ಯಾರ್ಥಿಗಳಿಗೆ ಒಂದೇ ಇದ್ದ ಪಠ್ಯ ಪುಸ್ತಕವನ್ನು ಎರಡು ಭಾಗಗಳಾಗಿ ವಿಭಜಿಸಿ ಮುದ್ರಿಸಿ ನೀಡಲಾಗುತ್ತದೆ.
ಅರ್ಧ ವಾರ್ಷಿಕ ಪರೀಕ್ಷೆವರೆಗೂ ಒಂದು ಪುಸ್ತಕ, ನಂತರದ ವಾರ್ಷಿಕ ಪರೀಕ್ಷೆವರೆಗೂ ಮತ್ತೊಂದು ಪುಸ್ತಕ ನೀಡಲಾಗುವುದು. ಎರಡು ಭಾಗ ಮಾಡಿ ಪಠ್ಯಪುಸ್ತಕ ಮುದ್ರಿಸುವುದರಿಂದ ಶೇಕಡ 50ರಷ್ಟು ತೂಕ ಕಡಿಮೆಯಾಗಲಿದೆ. ಶಾಲಾ ಪಠ್ಯಪುಸ್ತಕಗಳು ಮತ್ತು ಇತರೆ ಸಾಮಗ್ರಿಗಳಿಂದ ಬ್ಯಾಗ್ ಹೊರೆ ಹೆಚ್ಚಾಗಿದೆ. ಶಾಲಾ ಹಂತದಲ್ಲಿಯೇ ತೂಕ ಇಳಿಕೆಗೆ ಕ್ರಮ ಕೈಗೊಳ್ಳಲಾಗಿದೆ.
ಮಧ್ಯ ವಾರ್ಷಿಕ ಪರೀಕ್ಷೆಯವರೆಗೆ ಒಂದು, ದಸರಾ ರಜೆ ಬಳಿಕ ಮತ್ತೊಂದು ಪುಸ್ತಕ ನೀಡಲಾಗುತ್ತದೆ. ಪಠ್ಯಪುಸ್ತಕ ವಿಭಜಿಸಿ ನೀಡುವುದರಿಂದ ಮಕ್ಕಳ ಶಾಲಾ ಬ್ಯಾಗ್ ತೂಕ ಕಡಿಮೆಯಾಗಲಿದೆ. ನಿರ್ವಹಣೆ ಸುಲಭವಾಗುತ್ತದೆ. ಮಕ್ಕಳ ಒತ್ತಡ ಇಳಿಕೆಯಾಗುತ್ತದೆ. ಈ ನಿಟ್ಟಿನಲ್ಲಿ ನೂತನ ಯೋಜನೆ ಜಾರಿಗೊಳಿಸಲಿದ್ದು, ಪುಸ್ತಕಗಳ ಮುದ್ರಣ ವೆಚ್ಚ ಅಂದಾಜು 10 ಕೋಟಿ ರೂಪಾಯಿಯಷ್ಟು ಹೆಚ್ಚಾಗಬಹುದು ಎಂದು ಹೇಳಲಾಗಿದೆ.